NewsNews In KannadaNorth Karnataka

ನೀರಸಾಗರ ಜಲಾಶಯದ ಸುತ್ತಮುತ್ತಲಿನ ಗ್ರಾಮಸ್ಥರು ಪಂಪ್ ಸೆಟ್ ಮೂಲಕ ನೀರು ಪಂಪ್ ಮಾಡದಂತೆ ಸೂಚನೆ

ಹುಬ್ಬಳ್ಳಿ , ಮಾ.17: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹಳೆ ಹುಬ್ಬಳ್ಳಿಯ 22 ವಾರ್ಡುಗಳಿಗೆ ಕುಡಿಯುವ ನೀರನ್ನು ಪೂರೈಸಲು ನೀರಸಾಗರ ಜಲಾಶಯದಿಂದ ಪ್ರತಿನಿತ್ಯ 25 ಎಂ.ಎಲ್‌.ಡಿ ನೀರನ್ನು ಪಡೆಯಲಾಗುತ್ತಿದೆ. ಪ್ರಸ್ತುತ ನೀರಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, 0.3 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಲಭ್ಯವಿರುವ 0.3 ಟಿಎಂಸಿ ನೀರನ್ನು ಹುಬ್ಬಳ್ಳಿ ನಗರಕ್ಕೆ ಬೇಕಾಗುವ ಕುಡಿಯುವ ನೀರಿನ ಪ್ರಮಾಣವನ್ನು ಕಾಯ್ದಿರಿಸಬೇಕಾಗುತ್ತದೆ.

 

ಮುಖ್ಯಮಂತ್ರಿಗಳು ವಿಡಿಯೋ ಮೂಲಕ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮವಹಿಸಲು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ಲಭ್ಯವಿರುವ ಕುಡಿಯುವ ನೀರನ್ನು ಮಳೆಗಾಲ ಪ್ರಾರಂಭವಾಗಿ ಜಲಾಶಯಗಳಿಗೆ ನೀರು ಬರುವವರೆಗೆ ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಕಾಯ್ದಿರಿಸಬೇಕಾಗಿರುವುದರಿಂದ ಕುಡಿಯುವ ನೀರನ್ನು ಬೇರೆ ಉದ್ಧೇಶಗಳಿಗೆ ಬಳಸದಂತೆ ನಿರ್ದೇಶಿಸಿದ್ದಾರೆ.

 

ನೀರಸಾಗರ ಜಲಾಶಯದ ಸುತ್ತಲೂ ಬರುವ ಗಂಭ್ಯಪೂರ ಗ್ರಾಮ ಪಂಚಾಯಿತ ವ್ಯಾಪ್ತಿಯ ಗ್ರಾಮಗಳಾದ ಗಂಭ್ಯಪೂರ, ಹುಲಿಕಟ್ಟಿ, ಲಿಂಗನಕೊಪ್ಪ ಮತ್ತು ಬಸವನಕೊಪ್ಪ ಗ್ರಾಮ ಪಂಚಾಯಿತ ವ್ಯಾಪ್ತಿಯ ಬಸವನಕೊಪ್ಪ, ಕಳಸದಕೊಪ್ಪ, ನೀರಸಾಗರ ಮತ್ತು ಕನ್ಯಾಕೊಪ್ಪ ಗ್ರಾಮಗಳ ರೈತರು ತಮ್ಮ ಹೊಲಗಳಿಗೆ ಜಲಾಶಯದ ನೀರನ್ನು ಮೋಟರ್ ಹಚ್ಚಿ ಪಂಪ್ ಮಾಡುವುದನ್ನು ತಕ್ಷಣ ನಿಲ್ಲಿಸಲು ತಿಳಿಸಲಾಗಿದ್ದು, ಒಂದು ವೇಳೆ ಮೋಟರ್ ಹಚ್ಚಿ ನೀರು ಪಂಪ್ ಮಾಡುವುದು ಕಂಡು ಬಂದಲ್ಲಿ ಅಂತಹವರ ಮೋಟರ್ ಪಂಪ್‌ಗಳನ್ನು ವಶಪಡಿಸಿಕೊಂಡು ಸಕ್ಷಮ ಪ್ರಾಧಿಕಾರದ ಮೂಲಕ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close