NewsNews In KannadaNorth Karnataka

ಹಳೆಹುಬ್ಬಳ್ಳಿ ಪೊಲೀಸ್ ಠಾಣೆ ,ಆಸ್ಪತ್ರೆ, ಪ್ರಾರ್ಥನಾ ಮಂದಿರಗಳಿಗೆ  ಭೇಟಿ ನೀಡಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್

ಹುಬ್ಬಳ್ಳಿ, ಏ.21: ಹುಬ್ಬಳ್ಳಿಯ ಜನರು ಶಾಂತಿ ಸೌಹರ್ದತೆಯಿಂದ ಬಾಳಬೇಕು. ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಆಯೋಗದ ದೊಡ್ಡ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ರಾಜ್ಯ ಹಾಗೂ ದೇಶದಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟಾಗಬಾರದು‌ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ನಜೀಮ್ ಹೇಳಿದರು.

ಹಳೆಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪೊಲೀಸ್ ಠಾಣೆ, ಆಸ್ಪತ್ರೆ, ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು,

ಭಾರತೀಯರೆಲ್ಲರೂ ಒಂದೇ ತಾಯಿ ಮಕ್ಕಳು.  ಶಾಂತಿ ಸೌಹಾರ್ದತೆ ಮೂಲಕ ದೇಶ ಹಾಗೂ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ. ಪೊಲೀಸ್ ಅಧಿಕಾರಿಗಳು ಹಾಗೂ ಇಲ್ಲಿನ ಜನರ ಜೊತೆ ಸಭೆ ನಡೆಸಿ ಶಾಂತಿ ಕಾಪಾಡಲು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.

ಹುಬ್ಬಳ್ಳಿಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ದಕ್ಷ ಪೊಲೀಸ್ ಅಧಿಕಾರಿಗಳು  ಸಮರ್ಥವಾಗಿ ಕಾನೂನು ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ.ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಪೊಲೀಸರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಸಂಪೂರ್ಣ ನಂಬಿಕೆಯಿದೆ.  ಹುಬ್ಬಳ್ಳಿ ನಗರದಲ್ಲಿ ಶಾಂತಿಯ ವಾತಾವರಣವಿರಲು ಪೊಲೀಸರು ಕಾರಣರಾಗಿದ್ದಾರೆ ಎಂದರು‌.

ದಿಡ್ಡಿ ಓಣಿಯ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ, ಅರ್ಚಕರಾದ ಪ್ರಕಾಶ ಬಾದ್ರಿ ಹಾಗೂ ಟ್ರಸ್ಟ್ ಕಮೀಟಿಯ ಮಂಜುನಾಥ ಶಿರೂರ ಅವರಿಂದ ದೇವಸ್ಥಾನಕ್ಕೆ ಧಕ್ಕೆ ಉಂಟಾಗಿದ್ದರ ಬಗ್ಗೆ ಮಾಹಿತಿ ಪಡೆದುಕೊಂಡರು. ಹಿಂದೂ ಮುಸ್ಲಿಂ ಎಲ್ಲರೂ ಒಂದೇ. ಪೊಲೀಸರು ನಿಮಗೆ ರಕ್ಷಣೆ ನೀಡುತ್ತಾರೆ. ನಾವು ಇದ್ದೇವೆ. ಯಾವುದೇ ಕಾರಣಕ್ಕೂ ಹೆದರಬೇಡಿ. ಹಿಂದೂ ಮುಸ್ಲಿಂ ಎಂಬ ಭೇದಭಾವ ಮಾಡದೇ ಎಲ್ಲರೂ ಸೌಹಾರ್ದತೆಯಿಂದ ಇರೋಣ ಎಂದು ಭರವಸೆ ನೀಡಿದರು.

ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ, ಡಾ.ರವೀಂದ್ರ ಗುರವ ಅವರಿಂದ ಆಸ್ಪತ್ರೆಗೆ ಹಾನಿ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಡಿಸಿಪಿ ಸಾಹಿಲ್ ಬಾಗ್ಲಾ,ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಹಾಗೂ ಪ್ರಭಾರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಡಾ.ಎನ್.ಆರ್.ಪುರುಷೋತ್ತಮ, ಆಯೋಗದ ಕಾರ್ಯದರ್ಶಿ ಮೊಹಮದ್ ನಜೀರ್,ಮುಖಂಡರಾದ ಡಾ.ಎನ್.ಎಫ್. ಮೋಸಿನ್, ಕಮರ್ ಬುರಬುರಿ ಸೇರಿದಂತೆ  ಇತರರು ಇದ್ದರು.

Please follow and like us:

Leave a Reply

Your email address will not be published.

Back to top button
Close