KarnatakaNewsNews In Kannada

ಮಾ.3 ರಿಂದ ಯುಪಿಐ ವಹಿವಾಟು ಪಾಕ್ಷಿಕ

ಹುಬ್ಬಳ್ಳಿ, ಫೆ.27: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ನಗದು ರಹಿತ ಯುಪಿಐ ವಹಿವಾಟುಗಳ ಮೂಲಕ ಟಿಕೆಟ್ ವಿತರಣೆಯನ್ನು ಪ್ರೋತ್ಸಾಹಿಸಲು ಮಾರ್ಚ್ 3 ರಿಂದ ಯುಪಿಐ ವಹಿವಾಟು ಪಾಕ್ಷಿಕವನ್ನು ಸಂಸ್ಥೆಯ ಎಲ್ಲ ವಿಭಾಗ, ಘಟಕಗಳಲ್ಲಿ ಆಚರಿಸಲಾಗುವುದು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಸಾರ್ವಜನಿಕ ಪ್ರಯಾಣಿಕರ ಸಂಚಾರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವುದರ ಜೊತೆಗೆ ನಗದು ರಹಿತ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಟಿಕೆಟ್ ವಿತರಣೆಗೆ ಯುಪಿಐ ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ-ಗ್ರಾಮಾಂತರ ವಿಭಾಗದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿತ್ತು. ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಸಾರ್ವಜನಿಕರಿಂದ ಹಾಗೂ ಸಂಸ್ಥೆಯ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 3 ರಂದು ಗದಗದಲ್ಲಿ ಜರುಗಿದ ಸಮಾರಂಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಂಸ್ಥೆಯ ಬಸ್ಸುಗಳಲ್ಲಿ ನಗದು ರಹಿತ ಯುಪಿಐ ಯೋಜನೆಗೆ ಚಾಲನೆ ನೀಡಿದರು. ಈ ವ್ಯವಸ್ಥೆಯನ್ನು ಎಲ್ಲ ಘಟಕಗಳಲ್ಲಿ ಅಳವಡಿಸುವ ಕಾರ್ಯವು ಫೆಬ್ರವರಿ 16 ರಂದು ಮುಕ್ತಾಯಗೊಂಡಿರುತ್ತದೆ. ಸಂಸ್ಥೆಯ 50 ಘಟಕಗಳ ಸಾರಿಗೆಗಳಲ್ಲಿ ಯುಪಿಐ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಚಾಲನಾ ಸಿಬ್ಬಂದಿಗಳ ಮಧ್ಯೆ ಚಿಲ್ಲರೆ ಸಮಸ್ಯೆ ಉಂಟಾಗುವುದನ್ನು ತಡೆಯಬಹುದಲ್ಲದೇ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಿದಂತಾಗುತ್ತದೆ.

ಪ್ರಸ್ತುತ ಸಂಸ್ಥೆಯಲ್ಲಿ ಪ್ರತಿದಿನ ಅಂದಾಜು 15 ಸಾವಿರ ವಹಿವಾಟುಗಳಿಂದ ಒಟ್ಟು ಸುಮಾರು ರೂ.14 ಲಕ್ಷ ಆದಾಯ ಸಂಗ್ರಹವಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 2.59 ಲಕ್ಷ ವಹಿವಾಟುಗಳಿಂದ ಒಟ್ಟು ರೂ.3.79 ಕೋಟಿ ಸಂಗ್ರಹವಾಗಿರುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close