NewsNews In KannadaNorth Karnataka

ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ

ಹುಬ್ಬಳ್ಳಿ , ಜ. 10: ವೈದ್ಯರು ರೋಗಿಗಳ ಜೊತೆ ಪ್ರೀತಿಯಿಂದ ವರ್ತಿಸಬೇಕು. ವೈದ್ಯರ ಮಾತಿನಿಂದ ರೋಗಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜನರಿಗೆ ಉತ್ತಮ ಸೇವೆ ನೀಡಲು ವೈದ್ಯರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು‌.

ಇಂದು ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ ಮತ್ತು ನವೀಕರಣಗೊಂಡ ಭಾನಜಿ ಡಿ.ಖಿಮಜಿ ಒಪಿಡಿ ಬ್ಲಾಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

ವೈದ್ಯರು ರೋಗಿಗಳ ಜೊತೆ ಬಹಳ ಪ್ರೀತಿಯಿಂದ ಚಿಕಿತ್ಸೆ ನೀಡಬೇಕು. ವೈದ್ಯರ ಮಾತಿನಿಂದ ರೋಗಿಗಳ ಮೇಲೆ ಬಹಳ ಪರಿಣಾಮ ಬೀರಲಿದೆ. ಉತ್ತರ ಕರ್ನಾಟಕದಲ್ಲಿ ಜನರು ಹೆಚ್ಚು ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಈ ಭಾಗದ ಜನರ ಜೀವನಶೈಲಿಯಿಂದ

ಬಾಯಿ ( ಒರಲ್ ) ಕ್ಯಾನ್ಸರ್ ಬರುತ್ತದೆ. ಈ ಆಸ್ಪತ್ರೆಯು ಪೂರ್ಣ ಪ್ರಮಾಣದ ಸಂಶೋಧನಾ ಕೇಂದ್ರವಾಗಬೇಕು. ಆರ್.ಬಿ. ಪಾಟೀಲ ಅವರ ಮೇಲೆ ಜನರು ಅಪಾರ ಪ್ರೀತಿ ವಿಶ್ವಾಸವನ್ನು ಹೊಂದಿದ್ದಾರೆ. ಹುಬ್ಬಳ್ಳಿ ಬಗ್ಗೆ ಚಿಂತನೆ ಮಾಡುವ ಸಿವಿಲ್ ಸೊಸೈಟಿಯಿತ್ತು. ಈಗಲೂ ಅದರ ಅವಶ್ಯಕತೆಯಿದೆ. ಈ ಹಿಂದೆ ಜನರು ಚಿಕಿತ್ಸೆಗಾಗಿ ಬೆಂಗಳೂರು, ಮುಂಬೈ ನಗರಕ್ಕೆ ತೆರಳುತ್ತಿದ್ದರು. ಒಳ್ಳೆಯ ಕೆಲಸಕ್ಕೆ ಎಲ್ಲರೂ ಸೇರಬೇಕು. ಮೇಕ್ ಇನ್ ಇಂಡಿಯಾ ಮೂಲಕ ಹೊಸ ರೇಡಿಯೋ ಥೆರಪಿ ಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗುವುದು. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ ಮೂಲಕ ಮುಂದಿನ ದಿನಗಳಲ್ಲಿ ಶೇ.100 ರಷ್ಟು ವಸ್ತುಗಳನ್ನು ಸ್ವದೇಶದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಗಳಿವೆ. ದೇಶದಲ್ಲಿರುವ 4 ಡೆಕಾ ಕಾನ್ ಗಳಲ್ಲಿ 3 ಡೆಕಾಕಾನ್ ಗಳು ಬೆಂಗಳೂರಿನಲ್ಲಿವೆ. ಒಳ್ಳೆಯ ಕೆಲಸ ಮಾಡಿದಾಗ ಪ್ರೋತ್ಸಾಹಿಸಿ, ಕೆಟ್ಡ ಕೆಲಸ ಮಾಡಿದಾಗ ಕಿವಿ ಹಿಂಡಬೇಕು. ನಮ್ಮ ಹಿರಿಯರು ನಮಗೆ ಆಶೀರ್ವಾದ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ರೂ. 500 ಕೋಟಿ ವೆಚ್ಚದಲ್ಲಿ ಕಾಕ್ಲಿಯರ್ ಇಂಫ್ಲಾಂಟ್, 437 ನಮ್ಮ ಕ್ಲಿನಿಕ್ ಕೇಂದ್ರಗಳು, 100 ಪಿಎಚ್ ಸಿ ಆಸ್ಪತ್ರೆಗಳನ್ನು ಸಿ.ಎಚ್. ಸಿಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 10 ವೈದ್ಯಕೀಯ ಕಾಲೇಜುಗಳಲ್ಲಿ ಕಿಮೊಥೆರಪಿ ಆರಂಭಿಸಲಾಗುವುದು. 4 ಹೊಸ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು. ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ, ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ ತೆರೆಯಲಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಆಯುಷ್ಮಾನ್ ಭಾರತ ಕಾರ್ಡ್ ಹೊಂದಿದ ರಾಜ್ಯ ಕರ್ನಾಟಕವಾಗಿದೆ. ರೂ‌. 25 ಕೋಟಿ ವೆಚ್ಚದಲ್ಲಿ 4 ಜಿಲ್ಲೆಗಳಲ್ಲಿ ಕಾಮ್ ಪ್ಲಾಂಟ್ ಸ್ಥಾಪಿಸಲಾಗುವುದು ಎಂದರು.

ಆಯುರ್ವೇದಿಕ್ ಹರ್ಬಲ್ ಚಿಕಿತ್ಸೆಯಂತೆ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡುವ ವಿಧಾನ ಬರಬೇಕಿದೆ. ಎಲ್ಲಿ ಏನು ನಡೆದಿದೆ ಎಂಬುದು ಜನರಿಗೆ ಗೊತ್ತಾಗಬೇಕಿದೆ. ಕ್ಯಾನ್ಸರ್ ಆಸ್ಪತ್ರೆಯ ಬೆಳವಣಿಗೆ ಸಹಾಯ ಮಾಡಲಾಗುವುದು. ಹುಬ್ಬಳ್ಳಿಯಲ್ಲಿ ಒಂದು ಸಂಸ್ಥೆಯಾದರೆ ಎರಡು ಮೂರು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಕ್ಯಾನ್ಸರ್ ರೋಗವು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಸಿಲುಕಿಸುವ ಒಂದು ಸ್ಥಿತಿಯಾಗಿದೆ. ಕ್ಯಾನ್ಸರ್ ರೋಗ ಬಂದ ತಕ್ಷಣ ಮನುಷ್ಯ ಒತ್ತಡಕ್ಕೆ ಸಿಲುಕುತ್ತಾನೆ. ರೋಗ ಪ್ರತಿರೋಧಿಸುವ ಶಕ್ತಿ ಕಡಿಮೆ ಆಗುತ್ತದೆ. ಮಾನಸಿಕ, ದೈಹಿಕ ಶಕ್ತಿಯಿಂದ ರೋಗವನ್ನು ಗೆಲ್ಲಬಹುದು. ಪ್ರತಿದಿನ ಸಾವಿರಾರು ಜೀವಕೋಶಗಳು ಹುಟ್ಟಿ ಸಾವಿಗೀಡಾಗುತ್ತವೆ. ನಮ್ಮ ತಾಯಿಯವರು ಕ್ಯಾನ್ಸರ್ ಗೆ ತುತ್ತಾಗಿದ್ದರು. ಹೊಸ ತಂತ್ರಜ್ಞಾನದಿಂದ ಇಂದು ರೋಗವನ್ನು ಗುಣಪಡಿಸಬಹುದು. ಕ್ಯಾನ್ಸರ್ ಹೋಗಲಾಡಿಸುವ ಮಟ್ಟದಲ್ಲಿ ವೈದ್ಯಕೀಯ ವಿಜ್ಞಾನ ಬೆಳೆದಿದೆ. ಹೊಸ ಚಿಕಿತ್ಸಾ ಕ್ರಮಗಳಿಂದ ರೋಗ ಹೋಗಲಾಡಿಸಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಾಸಕರಾದ ಅರವಿಂದ ಬೆಲ್ಲದ ಮಾತನಾಡಿ, ಆರ್.ಬಿ. ಪಾಟೀಲ ಅವರ ಸೇವೆಯನ್ನು ಪರಿಗಣಿಸಿ ರೂ. 10 ಕೋಟಿ ಅನುದಾನವನ್ನು ನೀಡಲಾಗಿದೆ. ಈ ಸಂಸ್ಥೆ ಬೆಳವಣಿಗೆಗೆ ಹಣಕಾಸಿನ ನೆರವು ಅಗತ್ಯವಾಗಿದೆ. ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು. ವೈದ್ಯರು ಒಳ್ಳೆಯ ಚಿಕಿತ್ಸೆ ನೀಡುತ್ತಾರೆ ಎಂಬ ಭರವಸೆಯನ್ನು ಜನರು ಹೊಂದಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ ಯೋಜನೆಯಡಿ ವರ್ಷದಲ್ಲಿ 5 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ಪಡೆಯಬಹುದು. ರೂ. 250 ಕೋಟಿ ಹಣವನ್ನು ಜಯದೇವ ಹೃದಯ ಆಸ್ಪತ್ರೆ ನೀಡಿದ್ದು, ಮುಂದಿನ ತಿಂಗಳಲ್ಲಿ ಈ ಆಸ್ಪತ್ರೆಯ ಭೂಮಿ ಪೂಜೆ ಮಾಡಲಾಗುವುದು. ಬೆಳಗಾವಿಯಲ್ಲಿ 50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಆಸ್ಪತ್ರೆ ಆರಂಭಿಸಲಾಗುವುದು. ಜನರಿಗೆ ಉತ್ತಮ ಸೇವೆ ನೀಡುವುದು ಮುಂದುವರೆಯಬೇಕು ಎಂದರು.

ವೈದ್ಯ ಬಿ.ಆರ್. ಪಾಟೀಲ್ ಮಾತನಾಡಿ, 10 ಕೋಟಿ ಅನುದಾನ ನೀಡಿದ್ದಾರೆ. ಆಸ್ಪತ್ರೆ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. 3 ಸಾವಿರಕ್ಕಿಂತ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಪಾನ್ ದೇಶದಲ್ಲಿ ಬಾಯಿ, ನಾಲಿಗೆ ಕ್ಯಾನ್ಸರ್ ಕಂಡು ಬರುತ್ತದೆ. ಭಾರತದಲ್ಲಿ ಬೇರೆ ರೀತಿಯ ಕ್ಯಾನ್ಸರ್ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಎಂದರೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕ್ಯಾನ್ಸರ್ ಪತ್ತೆ ಮಾಡಲು ಯಂತ್ರ ಬಳಸಲಾಗುವುದು. ಕಿಮೊಥೆರಪಿ ಸೇರಿದಂತೆ ವಿವಿಧ ಚಿಕಿತ್ಸೆ ನೀಡಲಾಗುತ್ತಿದೆ. ರೂ.50 ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗಿದೆ. ಜನರ ಸಹಾಯ ಸಹಕಾರ ಹೀಗೆ ಇರಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೇಕ್ ಇನ್ ಇಂಡಿಯಾದಲ್ಲಿ ರೂ.5 ಕೋಟಿ ವೆಚ್ಚದ ಪನೆಸಿಯಾ ಕಂಪನಿ ತಯಾರಿಸಿದ ರೇಡಿಯೋ ಥೆರಪಿ ಯಂತ್ರ ಬಿಡುಗಡೆ ಮಾಡಿದರು. ರೂ. 1 ಕೋಟಿ 40 ಲಕ್ಷದ ಚೆಕ್ ನ್ನು ಕ್ಯಾನನ್ ಕಂಪನಿಯ

ಸೋವಿರಾಜನ್ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಮಹಾಪೌರ ಈರೇಶ ಅಂಚಟಗೇರಿ, ಪದ್ಮಶ್ರೀ ಎಂ.ಎಂ. ಜೋಶಿ, ಯಮನಕ್ಕ ಪಾಟೀಲ, ಡಾ. ಸುರೇಶ ದುಗಾಣಿ, ವೈದ್ಯರು, ದಾನಿಗಳು ಸೇರಿದಂತೆ ಇತರರು ಇದ್ದರು.

ಮಹೇಂದ್ರಸಿಂಘಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Please follow and like us:

Leave a Reply

Your email address will not be published.

Back to top button
Close