NewsNews In KannadaNorth Karnataka

ಒಂದು ವರ್ಷದ ಅವಧಿಯ ಕಾಲಮಿತಿಯೊಳಗೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಬೇಕು ಸಿ.ಎಂ.ಬಸವರಾಜ ಬೊಮ್ಮಾಯಿ ಸೂಚನೆ

ಹುಬ್ಬಳ್ಳಿ , ಜೂ.26: ಮುಂದಿನ ಒಂದು ವರ್ಷದ ಅವಧಿಯೊಳಗೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು.ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಮತ್ತು ಆ ಮೂಲಕ ಕಾರವಾರ ಬಂದರಿಗೆ ಸಂಪರ್ಕ ಕಲ್ಪಿಸುವ ಯೋಜನೆಯು ಅರಣ್ಯ ಹಾಗೂ ಪರಿಸರ ಮಂತ್ರಾಲಯದ ಕ್ಲಿಯರೆನ್ಸ್ ಪಡೆಯುವ ಹಂತದಲ್ಲಿದೆ ಶೀಘ್ರ ಯೋಜನೆ ಕೈಗೆತ್ತಿಕೊಳ್ಳುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಘಂಟಿಕೇರಿಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ,ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಅನುದಾನದಡಿ ನಗರಪ್ರದೇಶದ ಬಡವರ್ಗಗಳ ಪ್ರದೇಶದಲ್ಲಿ ಸುಮಾರು 34 ಕೋಟಿ ರೂ.ವೆಚ್ಚದ ವಿವಿಧ ಮೂಲಸೌಕರ್ಯಗಳ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ 30 ಕೋಟಿ ಇತ್ತು, ಸ್ವಾತಂತ್ರ್ಯಾನಂತರ ಈಗ ಈ ಪ್ರಮಾಣ 130 ಕೋಟಿಗೆ ಏರಿದೆ.ಶೇ.14 ರಷ್ಟಿದ್ದ ನಗರ ಪ್ರದೇಶದ ಜನಸಂಖ್ಯೆಯ ಪ್ರಮಾಣ ಶೇ.37 ಕ್ಕೆ ಏರಿಕೆಯಾಗಿದೆ.ಸ್ಮಾರ್ಟ್ ಸಿಟಿ ಯೋಜನೆ 2014-15 ರಿಂದ ಪ್ರಾರಂಭವಾಗಿ‌ 2020 ರ ಹೊತ್ತಿಗೆ ಪೂರ್ಣಗೊಳ್ಳಬೇಕಾಗಿತ್ತು.ಮೊದಲ ಎರಡು ವರ್ಷಗಳ ಕಾಲ ಯೋಜನೆ ಒಪ್ಪಿ ಅನುಷ್ಠಾನ ಮಾಡುವಲ್ಲಿ ಎಲ್ಲ ಪಾಲಿಕೆಗಳು ಹಿಂದೇಟು ಹಾಕಿದವು ಇದರಿಂದಾಗಿ ಯೋಜನೆ ವಿಳಂಬವಾಗಿದೆ.ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ 555 ಕೋಟಿ ರೂ.ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ.ಮುಂದಿನ ಒಂದು ವರ್ಷದೊಳಗೆ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.ಸಮಯ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು,ಗುಣಮಟ್ಟ ಕಾಪಾಡಿಕೊಳ್ಳದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯವರು ಸಭೆಯ ಮೂಲಕವೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ತಮಗೆ ಇಲ್ಲಿನ ಎಲ್ಲಾ ಪ್ರದೇಶಗಳ ಬಹುತೇಕ ಸಮಸ್ಯೆಗಳು ತಿಳಿದಿವೆ.ಮುಖ್ಯ ಕಾಲುವೆಯ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು.ಅಭಿವೃದ್ಧಿಯಲ್ಲಿ ಯಾವುದೇ ತಾರತಮ್ಯಕ್ಕೆ ಆಸ್ಪದವಿಲ್ಲ.300 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗ ಕೇಂದ್ರ ಸ್ಥಾಪನೆಗೆ ಅಗಸ್ಟ್ ತಿಂಗಳಲ್ಲಿ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗುವುದು.ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪಿಸಿ ಒಂದು ಲಕ್ಷ ಉದ್ಯೋಗ ಸೃಜನೆಯ ಬಜೆಟ್ ಘೋಷಣೆಯ ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿದೆ.ತುಮಕೂರು-ದಾವಣಗೆರೆ ಹಾಗೂ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ.ಹಳೆ ಹುಬ್ಬಳ್ಳಿ ಭಾಗದ ರೈತರ ಬೇಡಿಕೆಯಂತೆ ಇಲ್ಲಿ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು .

ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಮಾತನಾಡಿ,ದೇಶದಲ್ಲಿ ನಗರ ಮತ್ತು ಗ್ರಾಮೀಣ ಜನಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ.ಅದರ ವೇಗಕ್ಕೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ದೇಶದಾದ್ಯಂತ ಎಲ್ಲಾ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುವ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 3 ಲಕ್ಷ 60 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದಾರೆ.ಹುಬ್ಬಳ್ಳಿ ಧಾರವಾಡದಿಂದ ಬೆಂಗಳೂರು ವರೆಗಿನ ಜೋಡಿ ರೈಲು ಮಾರ್ಗ ನಿರ್ಮಾಣ ಕಾರ್ಯವನ್ನು ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ.ಬಡವರಿಗಾಗಿ ಕೇಂದ್ರ ಸರ್ಕಾರ ಪ್ರತಿ ಹದಿನೈದು ದಿನಗಳಿಗೊಂದು ಯೋಜನೆ ಜಾರಿಗೊಳಿಸಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 197 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ.ಅದರಲ್ಲಿ ಪೂರ್ಣಗೊಂಡಿರುವ ಸುಮಾರು 34 ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಇಂದು ಮುಖ್ಯಮಂತ್ರಿಯವರು ಲೋಕಾರ್ಪಣೆ ಮಾಡಿದ್ದಾರೆ.ಸರ್ಕಾರಿ ಶಾಲೆಗಳು ಸುಧಾರಣೆಯಾಗಿ ಮೇಲ್ದರ್ಜೆಗೇರಿವೆ.ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಲಾ ಶೇ.50 ರಷ್ಟು ಅನುದಾನದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಮಂಜೂರಾಗಿದ್ದ ಸುಮಾರು 110 ಕೋಟಿ ರೂ.ವೆಚ್ಚದ ಯೋಜನೆಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆಯಾಗಿವೆ.ಬಡವರು,ಕೊಳಚೆ ಪ್ರದೇಶಗಳ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರಕ್ಕೆ ಈ ಕೊರತೆ ಸರಿಪಡಿಸಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜು,ಪಶುವೈದ್ಯಕೀಯ ಪಾಲಿಕ್ಲಿನಿಕ್ ಮಂಜೂರು ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.

ಗಣಿ,ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ,ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ,ಕೆಹೆಚ್‌ಡಿಸಿ ಅಧ್ಯಕ್ಷ ಸಿದ್ದು ಸವದಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,ರಾಜ್ಯ ಕೃಷಿ ಉತ್ಪನ್ನಗಳ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ ಕಲಬುರ್ಗಿ, ಉಪಮೇಯರ್ ಉಮಾ ಮುಕುಂದ್, ಮಹಾನಗರಪಾಲಿಕೆ ಸದಸ್ಯರಾದ ಸರತಾಜ ಆದವಾನಿ,ಪೂಜಾ ಶೇಜವಾಡಕರ್, ಪ್ರೀತಿ ಖೋಡೆ,ನಿರಂಜನಯ್ಯ ಹಿರೇಮಠ, ಮಂಜುಳಾ ಜಾಧವ,ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್,ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ,ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಮತ್ತಿತರರು ಇದ್ದರು.

ಲೋಕಾರ್ಪಣೆಗೊಂಡ ಯೋಜನೆಗಳ ವಿವರ

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಪ್ಯಾಕೇಜ್ 3 ರಡಿ ನಗರ ಪ್ರದೇಶದ ಬಡವರ್ಗಗಳ ಪ್ರದೇಶಗಳಲ್ಲಿ ಸುಮಾರು 31.4 ಕೋಟಿ ರೂ.ವೆಚ್ಚದಲ್ಲಿ ತೊರವಿಗಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 6 ಕಿ.ಮೀ.ರಸ್ತೆ ನಿರ್ಮಾಣ.

ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆಗಳ ಸುಧಾರಣೆ,ಒಳಚರಂಡಿ ನಿರ್ಮಾಣ,ಬೀದಿ ದೀಪಗಳ ಅಳವಡಿಕೆ,ಪಾದಚಾರಿ ಮಾರ್ಗಗಳು ಮತ್ತಿತರ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.ಐದು ವರ್ಷಗಳ ನಿರ್ವಹಣೆಯೂ ಒಳಗೊಂಡಿದೆ.

ಹರಿಶ್ಚಂದ್ರ ರುದ್ರಭೂಮಿಯಲ್ಲಿ 2.8 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗಿದೆ. ಸ್ಥಳ ಮತ್ತು ಉರುವಲುಗಳ ಕೊರತೆಗೆ ಪರಿಹಾರ ಇದಾಗಿದೆ.

Please follow and like us:

Leave a Reply

Your email address will not be published.

Back to top button
Close