NewsNews In Kannada

ಕಾರ್ಯಾಚರಣೆ ಯಶಸ್ವಿ; ಕವಲಗೇರಿಯಲ್ಲಿ ಚಿರತೆ ಸೆರೆ: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ: ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ ಬೋನಿ (ಕೇಜ್)ಗೆ ನಿನ್ನೆ ತಡ ರಾತ್ರಿ ಚಿರತೆ ಸಿಕ್ಕಿಬಿದಿದ್ದು, ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನ ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳಲ್ಲಿ ಚಿರತೆ ವಾಸವಾಗಿತ್ತು. ಗ್ರಾಮದ ರೈತರು ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದು, ಅದು ಎತ್ತರವಾಗಿ, ದಟ್ಟವಾಗಿ ಬೆಳೆದಿದ್ದರಿಂದ ಚಿರತೆ ಅಡಗಿಕೊಳ್ಳಲು ಸಹಾಯಕವಾಗಿತ್ತು.


ಅರಣ್ಯ ಇಲಾಖೆಯ ಡಿಎಪ್ಓ ನೇತೃತ್ವದಲ್ಲಿ ಸುಮಾರು 60 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಚಿರತೆ ಕಾರ್ಯಾಚರಣೆಯನ್ನು ನಿರಂತರವಾಗಿ ಮತ್ತು ತೀವ್ರವಾಗಿ ಮಾಡುತ್ತಿದ್ದರು.

ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳ ಮಧ್ಯ ಹಾಗೂ ಸುತ್ತಲೂ ಸುಮಾರು 6 ಕ್ಕೂ ಹೆಚ್ಚು ಬೋನಗಳನ್ನು ಮೌಂಸದೊಂದಿಗೆ ಇಟ್ಟಿದ್ದರು.
ಬಹುಶಃ ನಿನ್ನ ತಡ ರಾತ್ರಿ ಅಥವಾ ಬೆಳಗಿನ ಜಾವ ಚಿರತೆ ಬೋನಿನಲ್ಲಿರುವ ಮೌಂಸ ತಿನ್ನಲು ಬಂದು ಸಿಕ್ಕಿ ಹಾಕಿ ಕೊಂಡಿದೆ. ಚಿರತೆ ಸುರಕ್ಷಿತವಾಗಿ ಸೆರೆ ಸಿಕ್ಕಿದೆ.
ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಡಿಎಪ್ಓ ಯಶಪಾಲ ನೇತೃತ್ವದ ಎಲ್ಲ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಭಿನಂದಿಸಿದ್ದಾರೆ.

ಕಂದಾಯ ಇಲಾಖೆ, ಗ್ರಾಮ ಪಂಚಾಯತ, ಆರೋಗ್ಯ ಇಲಾಖೆ ಸಹಕಾರ:
ಚಿರತೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ., ತಹಸಿಲ್ದಾರ ಸಂತೋಷ ಬಿರಾದಾರ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಜಿಲ್ಲಾ ಪಂಚಾಯತ ಸಿಇಓ ಡಾ‌ಸುಶೀಲಾ ಬಿ ಅವರ ಮಾರ್ಗದರ್ಶನದಲ್ಲಿ ಕನಕೂರ ಗ್ರಾಮ ಪಂಚಾಯತ ಸಿಬ್ಬಂದಿಗಳು ಕವಲಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ಜನರಲ್ಲಿ ಚಿರತೆ ಕುರಿತು ಜಾಗೃತಿ, ಜನಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಲು ಸಹಕಾರ ಪಡೆದುದ್ದಾರೆ. ಮತ್ತು ಚಿರತೆ ಕಾರ್ಯಾಚರಣೆಗೆ ಅಗತ್ಯವಿರುವ ಸಹಾಯವನ್ಬು ನಿರಂತರವಾಗಿ ಮಾಡಿದ್ದಾರೆ. ವಿವಿಧ ಇಲಾಖೆಗಳ ಸಹಕಾರದಿಂದ ಚಿರತೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಕವಲಗೇರಿ ಗ್ರಾಮಸ್ಥರಿಗೂ ಕೃತಜ್ಞತೆ: ಚಿರತೆ ಕಾರ್ಯಾಚರಣೆ ಯಶ್ವಿಗೊಳಿಸಲು ಸಹಕರಿಸಿದ ಕವಲಗೇರಿ ಗ್ರಾಮಸ್ಥರಿಗೆ, ಅಲ್ಲಿನ ರೈತರಿಗೆ ಜಿಲ್ಲಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ನೃಪತುಂಗ ಬೆಟ್ಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆ ಇರುವ ಕುರಿತು ಮತ್ತೆ ಯಾವುದೇ ಪುರಾವೆ, ಗುರುತುಗಳು ಕಂಡುಬಂದಿಲ್ಲ. ಅರಣ್ಯ ಇಲಾಖೆಯ ಒಂದು ತಂಡ ನೃಪತುಂಗ ಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪ್ರತಿದಿನ ನಿರತಂರವಾಗಿ ಚಿರತೆಗಾಗಿ ಕಾರ್ಯಾಚರಣೆ ಮಾಡುತ್ತಿದೆ.

ಹುಬ್ಬಳ್ಳಿ ನೃಪತುಂಗಬೆಟ್ಟ ಹಾಗೂ ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಸಿಕ್ಕಿರುವ ಚಿರತೆ ಮಲ(ಲದ್ದಿ)ವನ್ನು ಎರಡು ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎಂಬುವದನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಾಗಿ ಈಗಾಗಲೇ ಹೈದ್ರಾಬಾದ್ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಜಿಲ್ಲಾಡಳಿತ,ಅರಣ್ಯ ಇಲಾಖೆ ಈ ವರದಿ ಬರುವ ನಿರೀಕ್ಷೆಯಲ್ಲಿದೆ.

ಅಲ್ಲಿವರೆಗೂ ಸಾರ್ವಜನಿಕರು ಜಾಗೃತಿಯಿಂದ ಇದ್ದು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಮಹಾನಗರಪಾಲಿಕೆ ನೀಡುವ ಸಲಹೆ,ಸೂಚನೆಗಳನ್ಬು ಪಾಲಿಸುವ ಮೂಲಕ ಚಿರತೆ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಮತ್ತು ಪ್ರಯೋಗಾಲಯದ ವರದಿ ಬರುವವರೆಗೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಕವಲಗೇರಿಯಲ್ಲಿ ಸೆರೆ ಸಿಕ್ಕ ಚಿರತೆ ಇಂದು ಮರಳಿ ಕಾಡಿಗೆ:
ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಇಂದು ಬೆಳಿಗ್ಗೆ ಸೆರೆ ಹಿಡಿದಿರುವ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಇಂದು ರಾತ್ರಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡುತ್ತಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close