News In Kannada

ಲ್ಯಾಮಿಂಗ್ಟನ್ ಶಾಲೆಯ ಚುನಾವಣಾ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಸೆ.3 ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಲ್ಯಾಮಿಂಗ್‌ಟನ್ ಪ್ರೌಢಶಾಲೆಯ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿ ಚುನಾವಣಾ ನಿರ್ವಹಣೆ ಕುರಿತು ವೀಕ್ಷಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ಹು-ಧಾ ನಗರದಲ್ಲಿ ಒಟ್ಟು 842 ವಾರ್ಡಗಳಿವೆ. ಹುಬ್ಬಳ್ಳಿ ಲ್ಯಾಮಿಂಗ್‌ಟನ್ ಶಾಲೆಯಲ್ಲಿ 25 ವಾರ್ಡ, ಧಾರವಾಡ ಬಾಸೆಲ್ ಮಿಶನ್‌ ಶಾಲೆಯಲ್ಲಿ 25 ಹಾಗೂ ಪಾಲಿಟೆಕ್ನಿಕ್‌ನಲ್ಲಿ ಉಳಿದ ವಾರ್ಡಗಳನ್ನು ವಿಂಗಡನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 8,17,458 ಮತದಾರರಿದ್ದು, ಚುನಾವಣೆ ಕಾರ್ಯಗಳಿಗಾಗಿ 7 ಸಾವಿರ ಪೋಲಿಸರು ಹಾಗೂ 6,500 ಸಿಬ್ಬಂದಿ ನೇಮಿಸಲಾಗಿದೆ. ಸಿಬ್ಬಂದಿಗೆ ಈಗಾಗಲೇ ಮತದಾನಕ್ಕೆ ಸಂಬಂಧಿಸಿದಂತೆ ವಸ್ತುಗಳನ್ನು ನೀಡಲಾಗಿದೆ. ಅವುಗಳ ತಪಾಸಣೆ ಮಾಡಿಕೊಂಡು ಕೆಎಸ್‌ಆರ್‌ಟಿ ಹಾಗೂ ಮ್ಯಾಕ್ಸಿಕೋ ವಾಹನದಲ್ಲಿ ಆಯಾ ಮತಗಟ್ಟೆ ಕೇಂದ್ರಗಳಿಗೆ ತೆರಳಿದ್ದಾರೆ. ಎಲ್ಲ ಕಾರ್ಯಗಳು ಸುಗಮವಾಗಿ, ಸುರಕ್ಷಿತವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಚುನಾವಣೆಯು ಪ್ರಜಾಪ್ರಭುತ್ವದಲ್ಲಿ ದೊಡ್ಡದಾದ ಪ್ರಕ್ರಿಯೆಯಾಗಿದೆ. ಆದ್ದರಿಂದ ಕೊರೊನಾ ನಿಯಮಗಳ ಪಾಲನೆ ಮಾಡಿ ಸುರಕ್ಷತಾ ಕ್ರಮಗಳನ್ನು ತಗೆದುಕೊಂಡು ಚುನಾವಣೆ ನಡೆಸಲಾಗುತ್ತಿದೆ. ಎಎಸ್‌ಐ 175 ,ಹೆಚ್‌ಸಿ 92, ಪಿಸಿ 837, ಹೆಚ್‌ಜಿ 387 ಹಾಗೂ ಸೂಕ್ಷ್ಮ ಮತಗಟ್ಟೆಗೆ 2 ಪೋಲಿಸ್ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗೆ 3 ಸೇರಿ ಎಲ್ಲ ಮತಗಟ್ಟೆಗಳಲ್ಲಿಯೇ ಸುಮಾರು 1,486 ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಬಿ ಗೋಪಾಲಕೃಷ್ಣ, ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ಚುನಾವಣೆ ವೀಕ್ಷಣಾಧಿಕಾರಿ ಶಕೀಲ ಅಹಮದ್, ಜಿಲ್ಲಾ ನೋಡೆಲ್ ಅಧಿಕಾರಿ ಜುಬೇರ ಅಹಮದ್, ಪಾಲಿಕೆ ಚುನಾವಣೆ ಜಂಟಿ ಆಯುಕ್ತ ಸಮೀರ ಮುಲ್ಲಾ ಹಾಗೂ ಇನ್ನಿತರರು ಹಾಜರಿದ್ದರು.

Please follow and like us:

Leave a Reply

Your email address will not be published.

Back to top button
Close