ಭಾವೈಕ್ಯತೆಯ ರಾಯಭಾರಿ ಇಬ್ರಾಹಿಂ ಸುತಾರ ನಿಧನಕ್ಕೆ ಜಗದೀಶ್ ಶೆಟ್ಟರ್ ಕಂಬನಿ

ಹುಬ್ಬಳ್ಳಿ: ಹಿಂದು-ಮುಸ್ಲಿಂ ಭಾವೈಕ್ಯತೆಯ ರಾಯಭಾರಿಯಾಗಿ, ಕನ್ನಡ ನಾಡಿನ ಸಂತ ಕಬೀರ ಎಂದು ಹೆಸರುವಾಸಿಯಾಗಿದ್ದ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಇಬ್ರಾಹಿಂ ಸುತಾರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಕಂಬನಿ ಮಿಡಿದಿದ್ದಾರೆ.
ಇಬ್ರಾಹಿಂ ಸುತಾರ ಸರ್ವಧರ್ಮ ಪ್ರವಚನಗಳಿಗೆ ಹೆಸರಾಗಿದ್ದರು. ಬಾಲ್ಯದಲ್ಲಿ ಕುರಾನ್, ಭಜನೆ, ತತ್ವಪದ, ವಚನಗಳನ್ನು ಕಲಿತ ಅವರು, ನಂತರ ಉಪನಿಷತ್ ಹಾಗೂ ಭಗವದ್ಗೀತೆಯ ಅಧ್ಯಯನ ಮಾಡಿದರು. ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿದ್ದ ಇಬ್ರಾಹಿಂ ಸುತಾರ ಜೀವನಾನುಭವದಿಂದ ಧಾರ್ಮಿಕ ಅಂತಃಸತ್ವಗಳನ್ನು ಕಂಡುಕೊಂಡರು. ಧರ್ಮ, ದೇವರು, ಆರಾಧನೆಯ ವಿಧಾನ ಬೇರೆ ಬೇರೆಯಾದರು ಅಂತಿಮ ಸತ್ಯ ಒಂದೇ. ಎಲ್ಲಾ ಧರ್ಮಗಳ ಸಾರ ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತುವುದಾಗಿದೆ ಎಂಬುದನ್ನು ಕಂಡುಕೊಂಡರು. ಇವರು ಆರಂಭಿಸಿದ ಭಾವೈಕ್ಯದ ಜನಪದ ಸಂಗೀತ ಮೇಳ ನಾಡಿನಾದ್ಯಂತ ಹೆಸರುವಾಸಿಯಾಗಿತ್ತು.
ಕೋಮು ಸೌಹಾರ್ದ ಮಹತ್ವ ಸಾರಿದ ಅವರ ತತ್ವ ಹಾಗೂ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದು ನಾವು ಅವರಿಗೆ ತೋರುವ ಗೌರವವಾಗಿದೆ. 2018 ರಲ್ಲಿ ಕೇಂದ್ರ ಸರ್ಕಾರ ಇಬ್ರಾಹಿಂ ಸುತಾರ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು. ಇವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗ, ಬಂದು ಮಿತ್ರರು ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಜಗದೀಶ್ ಶೆಟ್ಟರ್ ತಮ್ಮ ಸಂತಾಪ ಸಂದೇಶದಲ್ಲಿ ಕೋರಿದ್ದಾರೆ.
