ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಂಡ ಕಾಮಗಾರಿಗಳ ಲೋಕಾರ್ಪಣೆ

ಹುಬ್ಬಳ್ಳಿ, ಏ.30:ಹೆಚ್ಚುತ್ತಿರುವ ನಗರದ ಜನಸಂಖ್ಯೆಗೆ ಅನುಗುಣವಾಗಿ ಜನಜೀವನಮಟ್ಟದ ಹೆಚ್ಚಳ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರವು 100 ಲಕ್ಷ ಕೋಟಿ ರೂ. ಗಳನ್ನು ಮೀಸಲಿಟ್ಟಿದೆ. ರಾಮನಗರ(ಅಳ್ನಾವರ)-ಧಾರವಾಡ-ನವಲಗುಂದ-ಗದಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನಾಗಿಸಿ ಭಾರತಮಾಲಾ 2 ರಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಹೇಳಿದರು.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನದಡಿ ಅಭಿವೃದ್ಧಿ ಪಡಿಸಲಾಗಿರುವ ಹಾಗೂ ಕಾಮಗಾರಿ ಪೂರ್ಣಗೊಂಡಿರುವ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಪ್ರಧಾನ ಮಂತ್ರಿಯವರ ವಿಶಿಷ್ಟ ಕಲ್ಪನೆಯೊಂದಿಗೆ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ನಗರ ಪ್ರದೇಶಗಳ ಜನಸಂಖ್ಯೆ ದೇಶದಾದ್ಯಂತ ಹೆಚ್ಚಾಗುತ್ತಿದೆ.ಅದಕ್ಕೆ ಅನುಗುಣವಾಗಿ ಜನಜೀವನ ಗುಣಮಟ್ಟದ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ನಗರಗಳ ಮೂಲಭೂತ ಸೌಕರ್ಯ ಅಭಿವೃದ್ಧಿ, ಸಾಂಸ್ಕೃತಿಕವಾಗಿ ಸಮಯದ ಉತ್ತಮ ವಿನಿಯೋಗಕ್ಕೆ ಒತ್ತು ನೀಡಲಾಗಿದೆ.ಕಳೆದ ವರ್ಷದಿಂದ ಪ್ರಾರಂಭಾವಿ ಒಟ್ಟು 5 ವರ್ಷಗಳ ಅವಧಿಯಲ್ಲಿ ದೇಶದ ನಗರಗಳ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ.ಮೀಸಲಿಡಲಾಗಿದೆ.ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗೆ 594 ಕೋಟಿ ರೂ.ಒದಗಿಸಲಾಗಿದ್ದು 64 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಅವುಗಳಲ್ಲಿ 39 ಕಾಮಗಾರಿಗಳು ಪೂರ್ಣಗೊಂಡಿವೆ. ಸಾರಿಗೆ ಸಂಪರ್ಕ ವ್ಯವಸ್ಥೆಗಾಗಿ ರೈಲು,ವಿಮಾನ ಹಾಗೂ ಹೆದ್ದಾರಿಗಳ ಉನ್ನತೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ.ಹುಬ್ಬಳ್ಳಿಯಿಂದ ಹೈದರಾಬಾದಿಗೆ ವಿಮಾನ ಸಂಚಾರ ಪ್ರಾರಂಭವಾಗಿದೆ. ಇನ್ನೆರಡು ದಿನಗಳಲ್ಲಿ ಮಂಗಳೂರು ಮತ್ತು ಮೈಸೂರಿಗೂ ವಿಮಾನಯಾನ ಪ್ರಾರಂಭವಾಗಲಿದೆ.ಜನಸಂಚಾರದ ಪ್ರತಿಕ್ರಿಯೆ ಆಧರಿಸಿ ವಾರದ ಏಳು ದಿನಗಳಿಗೂ ಸೇವೆ ವಿಸ್ತರಿಸಲು ಇಂಡಿಗೋ ಆಡಳಿತ ಮಂಡಳಿಗೆ ತಿಳಿಸಲಾಗಿದೆ.ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿ ಅಳ್ನಾವರ(ರಾಮನಗರ)-ಧಾರವಾಡ-ನವಲಗುಂದ-ಗದಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯನ್ನಾಗಿ ಭಾರತ ಮಾಲಾ 2 ರಡಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ.ಉಪರಾಜ್ಯ ಸಾರಿಗೆ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಹಂತದ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥಗಳಿಂದ ಎಂಟು ಪಥಗಳಿಗೆ ಹೆಚ್ಚಿಸಲು ಕೂಡ ಒಪ್ಪಿಗೆ ದೊರೆತಿದೆ.ನಗರಗಳಲ್ಲಿ ಗುಣ ಮಟ್ಟದ ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಮಾತನಾಡಿ,ಮಹಾತ್ಮ ಗಾಂಧಿ ಉದ್ಯಾನವನ,ಇಂದಿರಾ ಗಾಜಿನ ಮನೆ ಸೇರಿದಂತೆ ಹಲವು ಯೋಜನೆಗಳು ಇಂದು ಲೋಕಾರ್ಪಣೆಯಾಗಿದೆ.ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಅನುದಾನದ ಕಾಮಗಾರಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿವೆ.ಸಂಸದರಾಗಿರುವ ,ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿಯವರ ನಿರಂತರ ಪ್ರಯತ್ನದಿಂದ ಅವಳಿ ನಗರಗಳು ಸ್ಮಾರ್ಟ್ ಸಿಟಿ ಯೋಜನೆ ಅನುದಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಸಾಧ್ಯವಾಗಿವೆ.ಅಮೃತ 2 ಯೋಜನೆಯಡಿ ಒಳಚರಂಡಿ ಜಾಲ ಅಭಿವೃದ್ಧಿಗೊಂಡರೆ ಅವಳಿನಗರದ ನೈರ್ಮಲ್ಯಕ್ಕೆ ಪೂರಕವಾಗಲಿದೆ.ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಭಿವೃದ್ಧಿಯಾಗಿರುವ ಯೋಜನೆಗಳನ್ನು ಸ್ಥಳೀಯರ ಸಹಭಾಗಿತ್ವದೊಂದಿಗೆ ಉತ್ತಮ ನಿರ್ವಹಣೆ ಸಾಧ್ಯ.ತೋಳನಕೆರೆ,ಉಣಕಲ್ ಕೆರೆಗಳನ್ನು ವಿಹಾರ ತಾಣಗಳನ್ನಾಗಿ ಅಭಿವೃದ್ಧಿ ಪಡಿಸುವ ಕಾರ್ಯಗಳು ಸಾಗಿವೆ.ನಗರದ ಗದಗ,ಕಾರವಾರ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಸುಧಾರಣೆಯಾಗುತ್ತಿವೆ.ಮುಂಬರುವ 5-6 ತಿಂಗಳ ಅವಧಿಯಲ್ಲಿ ಅವಳಿ ನಗರ ಧೂಳು ಮುಕ್ತ ನಗರಗಳಾಗಲಿವೆ.ಇಲ್ಲಿನ ಜನ ಶಾಂತಿಪ್ರಿಯರು,ಸೌಹಾರ್ದ ವಾತಾವರಣ ಕಾಪಾಡಿಕೊಳ್ಳಬೇಕು ಎಂದರು.
