NewsNews In Kannada

*ಸಂಭ್ರಮದಿಂದ ಪೊಲೀಸ್ ಧ್ವಜ ದಿನ ಆಚರಣೆ**ಗಮನ ಸೆಳೆದ ಪೊಲೀಸ್ ಪಡೆಗಳ ಪಥ ಸಂಚಲನ* *ಪೊಲೀಸರಿಗೆ ಶಿಸ್ತು, ಸಂಯಮ ಬಹಳ ಅವಶ್ಯಕ* – *ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಅನಿಲ ಕುಲಕರ್ಣಿ*

ಹುಬ್ಬಳ್ಳಿ ಏ.2 : ಪೊಲೀಸರು ಸಮಾಜದ ಬಗ್ಗೆ ಕಳಕಳಿ ಭಾವನೆ ಹೊಂದಬೇಕು. ಸಾರ್ವಜನಿಕ ನೆಮ್ಮದಿಗೆ ಕಾರ್ಯ ಪ್ರವೃತ್ತರಾಗಬೇಕು. ಪೊಲೀಸ್ ಸಿಬ್ಬಂದಿಗೆ ಶಿಸ್ತು ಮತ್ತು ಸಂಯಮ ಬಹಳ ಅವಶ್ಯಕವಾಗಿರುತ್ತದೆ ಎಂದು ನಿವೃತ್ತ ಪೊಲೀಸ್ ಇನ್ಸಪೆಕ್ಟರ್
ಅನಿಲ ಕುಲಕರ್ಣಿ ಹೇಳಿದರು.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಸಿಎಆರ್ ಮೈದಾನದಲ್ಲಿ
ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ಕಾನೂನುಗಳ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯ. ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಬೇರೆಯವರು ನಮ್ಮ ಮೇಲೆ ಅಧಿಕಾರ ಚಲಾಯಿಸುವುದು ತಪ್ಪುತ್ತದೆ. ಅತ್ಯಂತ ಚುರುಕುತನದಿಂದ ತನಿಖೆ ಮಾಡಬೇಕು. ದಿನನಿತ್ಯದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ನಿವೃತ್ತ ಪೊಲೀಸ್ ಇನ್ಸಪೆಕ್ಟರ್
ಅರುಣಕುಮಾರ ಸಾಳುಂಕೆ ಮಾತನಾಡಿ, ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳು ತೋರಿದ ಸಹಕಾರ ಅನನ್ಯವಾದುದು. ಕಳೆದ 34 ವರ್ಷದಿಂದ ಬಳ್ಳಾರಿ, ಹಾವೇರಿ, ಗದಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾಡಿದ ಸೇವಾ ದಿನಗಳ ಮೆಲುಕು ಹಾಕಿದರು.ಸೇನಾ ಪಡೆಗಳು ಗಡಿಯನ್ನು ಕಾಯುವ ಹಾಗೆ, ಪೋಲಿಸರು ಆಂತರಿಕ ರಕ್ಷಣೆಯಲ್ಲಿ ತೊಡಗಿರುತ್ತಾರೆ. ದೈನಂದಿನ ಜೀವನದಲ್ಲಿ ಸವಾಲುಗಳು ಬರುವುದು ಸಹಜ. ಅವುಗಳನ್ನು ದಿಟ್ಟತನದಿಂದ ಎದುರಿಸಲು ಸನ್ನದ್ಧರಾಗಬೇಕು. ಸಾರ್ವಜನಿಕರು ನಮ್ಮ ಮೇಲೆ ಹೆಚ್ಚಿನ ಗೌರವ ಹೊಂದಿರುತ್ತಾರೆ. ಆ ಗೌರವವನ್ನು ಉಳಿಸಿಕೊಂಡು ಹೋಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಮಾತನಾಡಿ,ಕರ್ನಾಟಕ ರಾಜ್ಯ ಏಕೀಕರಣವಾದ ನಂತರ ಕರ್ನಾಟಕ ಪೊಲೀಸ ಪಡೆಯನ್ನು 1965 ಏಪ್ರಿಲ್‌ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಗೆ ಒಳಪಡಿಸಲಾಯಿತು. ಅದರ ಸ್ಮರಣೆಗಾಗಿ ಪ್ರತಿ ವರ್ಷ ಏಪ್ರಿಲ್ 2 ರಂದು ಪೊಲೀಸ ಧ್ವಜ ದಿನಾಚರಣೆಯನ್ನಾಗಿ ರಾಜ್ಯದ ಎಲ್ಲ ಘಟಕಗಳಲ್ಲಿ ಆಚರಿಸಲಾಗುತ್ತಿದೆ
ನಿತ್ಯ ಜೀವನದಲ್ಲಿ ಶಾಂತಿ ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಯವರು ತೋರಿದ ಶೌರ್ಯ, ಸಾಹಸ ಹಾಗೂ ನಿಸ್ವಾರ್ಥ ಸೇವೆಯನ್ನು ನೆನಪಿಸುವಂತಹ ದಿನವಿದು. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು. ಕಲ್ಯಾಣ ನಿಧಿಯಿಂದ ನಿವೃತ್ತಿ ಹೊಂದಿದ ಪೊಲೀಸ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಧನಸಹಾಯವನ್ನು ನೀಡಲಾಗುತ್ತದೆ. ಇಂದು ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ. ಕಲ್ಯಾಣ ನಿಧಿಯ ಮೊತ್ತದಿಂದ ಸಿಬ್ಬಂದಿಯವರ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಹಾಗೂ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತದೆ. ನಿವೃತ್ತ ಅಧಿಕಾರಿಗಳ ಕ್ಷೇಮ ನಿಧಿಯಿಂದ ನಿವೃತ್ತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ವೈದ್ಯಕೀಯ ವೆಚ್ಚವನ್ನು ಭರಿಸಲಾಗುತ್ತದೆ. ಕಳೆದ ಬಾರಿ ಪೊಲೀಸ್ ಧ್ವಜ ಮಾರಾಟದಿಂದ ರೂ.16 ಲಕ್ಷ ಸಂಗ್ರಹವಾಗಿತ್ತು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 2022ನೇ ಸಾಲಿನ ಪೊಲೀಸ್ ಧ್ವಜ ಬಿಡುಗಡೆ ಮಾಡಲಾಯಿತು. ವಿ.ಎಸ್.ವಿ ಪ್ರಸಾದ್ ಅವರು ಪೊಲೀಸ್ ಕಲ್ಯಾಣ ನಿಧಿಗೆ ರೂ. 1 ಲಕ್ಷ ದೇಣಿಗೆಯ ಚೆಕ್ ನೀಡಿದರು.

ಮುಖ್ಯಮಂತ್ರಿಯವರ ಚಿನ್ನದ ಪದಕಕ್ಕೆ ಭಾಜನರಾದ ಪೊಲೀಸ್ ಕಾನ್ಸಸ್ಟೇಬಲ್ ಗಳಾದ ನಾಗರಾಜ ಕೆಂಚಪ್ಪನವರ , ಶಿವಾನಂದ ತಿಮ್ಮಾಪುರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಂತೋಷ ಭೋಜಪ್ಪಗೋಳ ನೇತೃತ್ವದಲ್ಲಿ ಪೊಲೀಸ್ ಪಡೆಗಳ ಪಥ ಸಂಚಲನದ ಜರುಗಿತು. ಎಡ್ವೀನ್ ಡಿಸೋಜಾ ಅವರ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ಪಥ ಸಂಚಲನ ನಡೆಸಿತು. ಆರ್ ಎಸ್ ಐ ಭಾಗಣ್ಣ ವಾಲೀಕಾರ ಅವರು ರಾಷ್ಟ್ರ ಧ್ವಜದ ಬೆಂಗಾವಲು ವಹಿಸಿದ್ದರು.

ಉಪ ಪೊಲೀಸ್ ಆಯುಕ್ತರಾದ
ಸಾಹೀಲ್ ಬಾಗ್ಲಾ, ಎಸ್.ವಿ. ಯಾದವ್, ಗೋಪಾಲ ಬ್ಯಾಕೋಡ, ಎಸಿಪಿಗಳಾದ ಆರ್.ಕೆ.ಪಾಟೀಲ್, ತಾಯಪ್ಪ ದೊಡ್ಡಮನಿ, ಮಾಜಿ ಸಂಸದ ಐ.ಜಿ.ಸನದಿ,ಜಗದೀಶ್ ಹಂಚಿನಾಳ, ರವಿ.ಎಚ್. ನಾಯಕ ಸೇರಿದಂತೆ ಪೊಲೀಸ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published.

Back to top button
Close