ಶಿವರಾತ್ರಿ ಹುಬ್ಬಳ್ಳಿಯಲ್ಲೂ ಶಿವನಾಮಸ್ಮರಣೆ: ಕಾಶಿವಿಶ್ವನಾಥನ ಮಾದರಿ ನಿರ್ಮಾಣ ನೋಡಲು ಆಗಮಿಸಿದ ಭಕ್ತರ ದಂಡು

ಹುಬ್ಬಳ್ಳಿ, ಫೆಬ್ರವರಿ 27: ಮಹಾಶಿವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಗೀತ ರಸದೌತಣ, ಶಿವನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆಯಿಂದಲೇ ಸಿದ್ಧಾರೂಢಸ್ವಾಮಿ ಮಠದಲ್ಲಿ ಭಕ್ತರ ದಂಡು ಜಮಾಯಿಸಿತ್ತು. ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಸಿದ್ದಾರೂಢ ಶ್ರಿ ಹಾಗೂ ಗುರುನಾಥರೂಢ ಗದ್ದುಗೆ ದರ್ಶನ ಪಡೆದುಕೊಂಡರು.
ಇದಲ್ಲದೆ ಗೋಕುಲ ರಸ್ತೆಯಲ್ಲಿರುವ ಶಿವುಪರ ಕಾಲೋನಿ ಶಿವ ಮೂರ್ತಿ, ಪಾಲಿಕೊಪ್ಪದ ಶಿವಧಾಮ, ಗೋಕುಲ ರಸ್ತೆ ಬಸವೇಶ್ವರ ದೇವಸ್ಥಾನ, ಉಣಕಲ್ ರಾಮಲಿಂಗೇಶ್ವರ, ಚಂದ್ರಮೌಳೇಶ್ವರ, ಜಯನಗರ ಈಶ್ವರ ದೇವಸ್ಥಾನ, ಸ್ಟೇಷನ್ ರಸ್ತೆ, ಈಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ಹೋಮ ಹವನ ನಡೆಸಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದುಕೊಂಡರು.
ಕಾಶಿ ವಿಶ್ವನಾಥನ ಮಾದರಿ ದರ್ಶನ ಪಡೆದ ಭಕ್ತರು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾಶಿ ವಿಶ್ವನಾಥ ಮಂದಿರದ ಮಾದರಿ ನಿರ್ಮಾಣ ಮಾಡಲಾಗಿತ್ತು. ಕ್ಷಮತಾ ಸಂಸ್ಥೆ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕ್ಷೇತ್ರದ ಭಕ್ತರಿಗೆ ಈ ಬಾರಿ ಕಾಶಿ ವಿಶ್ವನಾಥೇಶ್ವರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ
ದೇಶಾಂಡೆನಗರದ ಜಿಮಖಾನಾ ಮೈದಾನದಲ್ಲಿ ಭಕ್ತರಿಗೆ ಶ್ರೀ ಕಾಶಿ ವಿಶ್ವನಾಥೇಶ್ವರ ಮಾದರಿ ಶಿವಲಿಂಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಹಾ ಶಿವರಾತ್ರಿ ಪ್ರಯುಕ್ತ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯಲ್ಲೇ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದ್ದು, ಇದನ್ನು ಕಣ್ ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತುಕೊಂಡು ಕಾಶಿವಿಶ್ವನಾಥನ ಶಿವಲಿಂಗ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
