ಹುಬ್ಬಳ್ಳಿ ತಾಲೂಕು ಪಂಚಾಯತಿಯಲ್ಲಿ ಸಡಗರದ ಸ್ವಾತಂತ್ರ್ಯೋತ್ಸವ ಆಚರಣೆ
ಹುಬ್ಬಳ್ಳಿ, ಆ.15: ಇಂದು ತಾಲೂಕು ಪಂಚಾಯತಿಯಲ್ಲಿ 77 ನೇ ಸ್ವಾತಂತ್ರ್ಯೋತ್ಸವವನ್ನು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಮಚಂದ್ರ ಹೊಸಮನಿ ಅವರು ಧ್ವಜಾರೋಹಣ ಮಾಡುವ ಮೂಲಕ ಸಡಗರದಿಂದ ಆಚರಿಸಲಾಯಿತು.
ಹುಬ್ಬಳ್ಳಿ ತಾಲೂಕಿನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಡಾ. ಸಂಗಮೇಶ ಬಂಗಾರಿಮಠ ಮಾತನಾಡಿ, ಬ್ರಿಟಿಷರು ನಮ್ಮ ದೇಶಕ್ಕೆ ವ್ಯಾಪಾರಕ್ಕಾಗಿ ಬಂದರು. ಇಲ್ಲಿನ ರಾಜರ ಒಳ ಜಗಳದಿಂದ ಲಾಭ ಪಡೆದು ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಭಗತಸಿಂಗ್, ಮಹಾತ್ಮ ಗಾಂಧಿ, ಸುಖದೇವ, ರಾಜಗುರು, ಸುಭಾಷ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್ ಮುಂತಾದ ಮಹನೀಯರು ಹೋರಾಡಿದರು. ಅವರ ಹೋರಾಟದ ಪ್ರತಿಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಇಂದು 77 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರನ್ನು ಪ್ರತಿಯೊಬ್ಬರೂ ನೆನೆಯಲೇಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ವ್ಯವಸ್ಥಾಪಕರಾದ ಶಿವಾನಂದ ನಸಬಿ, ಪಂಚಾಯತ ರಾಜ್ ಯೋಜನೆಯ ಸಹಾಯಕ ನಿರ್ದೇಶಕರಾದ ಸಿ.ಆರ್. ಕುರ್ತಕೋಟಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ಸಿ.ವಿ.ಕರವೀರಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಗದೀಶ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.