NewsNews In Kannada

ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಗಬ್ಬೂರು, ವಿವಿಧ ಪ್ರದೇಶಗಳಲ್ಲಿ 1001 ಸಸಿ ನೆಡುವಿಕೆ ಅಭಿಯಾನಕ್ಕೆ ಚಾಲನೆ

ಹುಬ್ಬಳ್ಳಿ, ಜೂ.5: ಜನರು ಪ್ಲಾಸ್ಟಿಕ್ ಬಳಕೆಯನ್ನು ಕಡೆಗಣಿಸಬೇಕು. ಸಾರ್ವಜನಿಕರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.

ಇಂದು ವಿದ್ಯಾನಗರದ ಹೊಸ ಕೋರ್ಟ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹುಬ್ಬಳ್ಳಿ, ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪರಿಸರವನ್ನು ಹಾಳು ಮಾಡದಂತೆ ತಡೆಯುವುದು ವಿಶ್ವ ಪರಿಸರ ದಿನದ ಮೂಲ ಉದ್ದೇಶವಾಗಿದೆ. ಆಧುನಿಕತೆಯಿಂದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಅಲ್ಲದೇ ಪರಿಸರದ ಕುರಿತು ಜನರಲ್ಲಿ ಕಾಳಜಿ ಕಡಿಮೆಯಾಗುತ್ತಿದೆ. ಇಂದು ಅತೀ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆಯನ್ನು ಮಾಡುತ್ತಿದ್ದೇವೆ. ಅವಶ್ಯಕತೆ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಪ್ಲಾಸ್ಟಿಕ್ ಬಳಕೆಯನ್ನು ಮಾಡಬೇಕು. ಕೆರೆ, ರಸ್ತೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ತ್ಯಾಜ್ಯವನ್ನು ಹಾಕದಂತೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷರಾದ ಎಮ್.ಎಸ್.ಬಾಣದ ಮಾತನಾಡಿ, ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಾಗೆ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಸಾಲು ಮರದ ತಿಮ್ಮಕ್ಕ ಅವರ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೃಪತುಂಗ ಬೆಟ್ಟ, ಗಬ್ಬೂರು ಹಾಗೂ ವಿವಿಧ ಪ್ರದೇಶಗಳಲ್ಲಿ 1001 ಸಸಿಗಳ ನೆಡುವಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಲ್ಲದೇ ಸಾಂಕೇತಿಕವಾಗಿ ಸಸಿಗಳನ್ನು ವಿತರಣೆ ಮಾಡಲಾಯಿತು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರಭುಲಿಂಗ ಗಡ್ಡದ, ಅರಣ್ಯ ಅಧಿಕಾರಿ ಪ್ರಕಾಶ ಕರಗುಪ್ಪಿ, ಹುಬ್ಬಳ್ಳಿ ನ್ಯಾಯಾಲಯದ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯ ಸಿಬ್ಬಂದಿ  ಪಾಲ್ಗೊಂಡಿದ್ದರು‌.

ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ರಾಜಶೇಖರ ತಿಳಗಂಜಿ ನಿರೂಪಿಸಿ, ವಂದಿಸಿದರು.

Please follow and like us:

Leave a Reply

Your email address will not be published.

Back to top button
Close