ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
ಹುಬ್ಬಳ್ಳಿ, ಅ.14: ಹುಬ್ಬಳ್ಳಿ ಧಾರವಾಡ ಅವಳಿ ನಗರಗಳನ್ನು ಮಾದರಿ ನಗರವನ್ನಾಗಿ ಮಾಡಲು ವಿವಿಧ ಯೋಜನೆಗಳನ್ನು ತಂದು ಕಾಮಗಾರಿಗಳನ್ನು ಮಾಡಲಾಗುತ್ತಿದೆ. ವಿವಿಧ ಇಲಾಖೆಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರೂ. 3 ಕೋಟಿ ವೆಚ್ಚದಲ್ಲಿ
ಚನ್ನಪೇಟೆಯ ಮುಖ್ಯ ರಸ್ತೆಯನ್ನು ನಗರ ವಿಕಾಸ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ಅಂಬೇಡ್ಕರ ನಗರದಲ್ಲಿಂದು ವಾರ್ಡ ನಂ.56 ರ ಅಂಬೇಡ್ಕರ್ ನಗರ, ತೊರವಿ ಹಕ್ಕಲ, ಖರಾದಿ ಓಣಿ, ಮೋಮಿನ ಪ್ಲಾಟಿನ ರೂ. 8 ಕೋಟಿ ವೆಚ್ವದ ವಿವಿಧ ಅಭಿವೃದ್ಧಿ ಕಾಮಗಾರಿ ರೂ. 2.95 ಕೋಟಿ ವೆಚ್ಚದ ಚನ್ನಪೇಟೆಯ ಮುಖ್ಯರಸ್ತೆ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಂತ ಹಂತವಾಗಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದಾಗ ಸಾರ್ವಜನಿಕರು ಸಹಕರಿಸಬೇಕು. ವಿದ್ಯಾನಗರದಲ್ಲಿ ಟೆಂಡರ್ ಶ್ಯೂರ್ ರಸ್ತೆ ಮಾಡಲಾಗಿದೆ. ಅಂಬೇಡ್ಕರ್ ನಗರ, ಚನ್ನಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ 24* 7 ಕುಡಿಯುವ ನೀರು, ಗ್ಯಾಸ್ ಲೈನ್ ಹಾಕಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿ ಎರಡನೇ ಹಂತದ ನಾಲಾ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿ, ಶಿಫಾರಸ್ಸು ಪಡೆಯಲಾಗಿದೆ. ಅಂಬೇಡ್ಕರ್ ನಗರದಲ್ಲಿ
ಸಮುದಾಯ ಭವನ ನಿರ್ಮಿಸಿ ಕೊಡಲಾಗುವುದು. 2024 ರೊಳಗಾಗಿ ಎಲ್ಲರಿಗೂ ಸೂರು ಕಲ್ಪಿಸುವ ಕನಸು ಪ್ರಧಾನಿ ನರೇಂದ್ರ ಮೋದಿ ಕಂಡಿದ್ದಾರೆ. ಮಾದರಿ ಕ್ಷೇತ್ರವಾಗಿಸಲು ಎಲ್ಲರ ಸಹಕಾರ ಅವಶ್ಯ ಎಂದು ಅಭಿವ್ಯಕ್ತ ಪಡಿಸಿದರು.
ಮಾಜಿ ಮಹಾಪೌರರಾದ ವೆಂಕಟೇಶ ಮೇಸ್ತ್ರಿ ಮಾತನಾಡಿ, ಚನ್ನಪೇಟ ರಸ್ತೆಯ ಮೂಲಕ ಸಾವಿರಾರು ವಾಹನ ಸವಾರರು ಓಡಾಡುತ್ತಾರೆ. ಕಾಂಕ್ರೀಟ್ ರಸ್ತೆಯಿಂದ ಜನರಿಗೆ ಓಡಾಡಲು ಪ್ರಯೋಜನವಾಗಲಿದೆ. ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು ಆದಷ್ಟು ಬೇಗ ಆಗಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯೆ ರಾಧಾಬಾಯಿ ಸಫಾರೆ ಮಾತನಾಡಿ, ಹೆಣ್ಣು ಮಕ್ಕಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಕಾಮಗಾರಿಗಳು ನಿಧಾನವಾದರೂ ಸಮರ್ಪಕವಾಗುತ್ತವೆ ಎಂದರು.ಪಾಲಿಕೆ ಸದಸ್ಯೆ ಚಂದ್ರಿಕಾ ಮೇಸ್ತ್ರಿ ಮಾತನಾಡಿದರು
ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಮಾಜಿ ಮಹಾಪೌರರಾದ ಡಿ.ಕೆ. ಚವ್ಹಾಣ, ಪಾಂಡುರಂಗ ಪಾಟೀಲ, ಮುಖಂಡರಾದ ನಾಗೇಶ ಕಲ್ಬುರ್ಗಿ, ಮೋಹನ ಹಿರೇಮನಿ, ಎಸ್.ಬಿ. ಹುಬ್ಬಳ್ಳಿಕರ, ಸುಭಾಷ ಅಂಕಲಕೋಟಿ, ಗೋಪಾಲ ಬದ್ದಿ, ರಮೇಶ ಕೋಲಗುಂಡಿ, ಓಬಳೇಶ ಗುರಗುಂಡಿ, ಸೀಮಾ, ಕನಕರಾಜ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.