NewsNews In KannadaNorth Karnataka

ಭ್ರಷ್ಟಾಚಾರ ಮಾಡದೆ, ಲಂಚ ಪಡೆಯದೆ, ಪ್ರಾಮಾಣಿಕವಾಗಿ, ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು: ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ , ಮಾ.02: ಧಾರವಾಡ ನನ್ನ ನೆಲ, ನಾನು ಹುಟ್ಟಿ ಬೆಳೆದ, ಆಡಿ ನಲಿದ, ಅಕ್ಷರ ಕಲಿಸಿದ ಊರು. ಈ ನೆಲದ ಪುಣ್ಯದಿಂದ ನಾವು ಎತ್ತರಕ್ಕೆ ಬೆಳೆಯುತ್ತೇವೆ. ಹುಟ್ಟಿ, ಬೆಳೆದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು, ನನ್ನ ಪುಣ್ಯ ಎಂದು ನಿರ್ಗಮಿತ ಧಾರವಾಡ ಜಿಲ್ಲಾಧಿಕಾರಿ ಹಾಗೂ ಪ್ರಸ್ತುತ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೃತಜ್ಞತೆಯಿಂದ ತಮ್ಮ ಸೇವಾ ದಿನಗಳನ್ನು ಸ್ಮರಿಸಿದರು.

ಅವರು ಇಂದು (ಮಾ.2) ಮಧ್ಯಾಹ್ನ ಧಾರವಾಡ ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳಾದ ನಿರ್ಗಮಿತ ಗುರುದತ್ತ ಹೆಗಡೆ ಅವರ ಬಿಳ್ಕೋಡುಗೆ ಹಾಗೂ ಆಗಮಿಸಿರುವ ನೂತನ ಡಿಸಿ ದಿವ್ಯ ಪ್ರಭು ಅವರ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.

ಧಾರವಾಡ ಅಕ್ಷರ, ನೈತಿಕ ಶಿಕ್ಷಣ, ಸಂಸ್ಕøತಿ ಮತ್ತು ಉತ್ತಮ ಸಂಸ್ಕಾರ ಬೆಳೆಸುತ್ತದೆ. ಪ್ರಾಮಾಣಿಕವಾಗಿ ಬದುಕುವ ಕಲೆ, ಜೀವನಶೈಲಿ ಕಲಿಸುತ್ತದೆ. ಇದು ನಮ್ಮ ಬದುಕು ರೂಪಿಸಿದ ಭೂಮಿ. ಇಲ್ಲಿಂದ ವೈಯಕ್ತಿಕವಾಗಿ ದೂರವಿರಲು ಸಾಧ್ಯವಾಗದು ಎಂದು ಭಾವುಕರಾಗಿ ಅವರು ನುಡಿದರು.

ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿ ತಮ್ಮ ಸೇವೆಯನ್ನು ಸಂತೋಷ, ಆತ್ಮ ತೃಪ್ತಿಯಿಂದ ಮಾಡಬೇಕಾದರೆ ಅವನು ಮೊದಲನೇಯದಾಗಿ, ತನ್ನ ಕುಟುಂಬದವರ ಸಂತೋಷ ಗಮನಿಸಬೇಕು, ಅವರಿಗೂ ಸಮಯ ಮೀಸಲಿಟ್ಟು ಅವರೊಂದಿಗೆ ಕಾಲಕಳೆದು ಅವರ ಬೇಕು, ಬೇಡಿಕೆಗಳಿಗೆ ಸ್ಪಂದಿಸಬೇಕು.

ಎರಡನೇಯದಾಗಿ ಭ್ರಷ್ಟಾಚಾರ ಮಾಡದೆ, ಲಂಚ ಪಡೆಯದೆ, ಪ್ರಾಮಾಣಿಕವಾಗಿ, ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ವೇತನದಲ್ಲಿ ಸಂತೃಪ್ತಿ ಜೀವನ ಸಾಗಿಸಬೇಕು. ಮತ್ತು ಮೂರನೇಯದಾಗಿ ಸಮಾಜದ ಪ್ರಮುಖ ಅಂಗಗಳೊಂದಿಗೆ ನಿಯಮಾನುಸಾರವಾದ ಉತ್ತಮ ಸಂಬಂಧಗಳನ್ನು ಹೊಂದಿ, ಅವರ ಸಲಹೆ, ಮಾರ್ಗದರ್ಶನಗಳನ್ನು ಆಲಿಸಿ, ಗೌರವಿಸಬೇಕು. ಮತ್ತು ಅವುಗಳ ಉಪಯುಕ್ತತೆ ಗಮನಿಸಿ ಜಾರಿ ಮಾಡಬೇಕು. ಅಂದಾಗ ನಮ್ಮ ನೌಕರಿ ಸುಸೂತ್ರ, ಸಂತೋಷದಾಯಕವಾಗುತ್ತದೆ ಎಂದು ಡಿಸಿ ಗುರುದತ್ತ ಹೆಗಡೆ ಅವರು ತಿಳಿಸಿದರು.

ಸುಮಾರು ಮೂರು ವರ್ಷಗಳ ಕಾಲ ಧಾರವಾಡ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲಾಧಿಕಾರಿಯಾಗಿ ಧಾರವಾಡದಲ್ಲಿ ಸೇವೆ ಸಲ್ಲಿಸಿದ್ದು ನನ್ನ ವೃತ್ತಿ ಜೀವನದ ಅಮೂಲ್ಯ ಕ್ಷಣಗಳು ಎಂದು ಸಂತೋಷ ವ್ಯಕ್ತಪಡಿಸಿ, ತಮ್ಮ ಆಡಳಿತ ಅವಧಿಯೂದ್ದಕ್ಕೂ ಸಹಕರಿಸಿದ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಮಾತನಾಡಿ, ಅಧಿಕಾರಿಗಳಿಗೆ ಹೃದಯವಂತಿಕೆ ಇದ್ದಾಗ ಮಾತ್ರ ದೀನ ದುರ್ಬಲರಿಗೆ, ಅಸಹಾಯಕರಿಗೆ ಮತ್ತು ರಕ್ಷಣೆ, ನ್ಯಾಯ ಬಯಸಿ ಬರುವವರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಹೃದಯವಂತ, ಚಾಣಾಕ್ಷ ಮತ್ತು ಉತ್ತಮ ಆಡಳಿತಗಾರರಾದ ಅಧಿಕಾರಿಯಾಗಿದ್ದರು. ವರ್ಗಾವಣೆ ಅನಿವಾರ್ಯವಾದರಿಂದ ಬದಲಾವಣೆ ಆಗಿದೆ. ಅವರ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು, ಫಲಪ್ರದವಾದ ಜನಸಂಪರ್ಕ ಸಭೆಗಳನ್ನು ಜಿಲ್ಲೆಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಮರ್ಥ ಆಡಳಿತಗಾರರಾಗಿದ್ದು, ಸರಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಿದ್ದಾರೆ. ಜಿಲ್ಲೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ, ಪ್ರಗತಿಗಾಗಿ ಅಧಿಕಾರಿಗಳಿಗೆ ಸರಕಾರವು ಎಲ್ಲ ನೆರವು, ಸಹಕಾರ, ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ಹೇಳಿದರು.

 

ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸೌಮ್ಯಸ್ವಭಾವದ ಗುರುದತ್ತ ಹೆಗಡೆ ಅವರು ಮತ್ತು ನಾನು ಒಂದೇ ಬ್ಯಾಚ್. ಜಿಲ್ಲೆಗೆ ಉತ್ತಮ ಆಡಳಿತ ನೀಡಿದ್ದಾರೆ. ಜಿಲ್ಲೆಯ ಎಲ್ಲ ನೌಕರ ಬಂಧುಗಳು ಅವರಿಗೆ ನೀಡಿದ್ದ ಸಹಕಾರವನ್ನು ನನಗೂ ನೀಡುತ್ತಾರೆ ಎಂಬ ಭರವಸೆ ಇದೆ. ಎಲ್ಲರೂ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯೋಣ ಎಂದು ತಿಳಿಸಿದರು.

 

ಮಹಾನಗರ ಪೊಲೀಸ ಆಯುಕ್ತರಾದ ರೇಣುಕಾ ಸುಕುಮಾರ ಹಾಗೂ ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೂಡ ಅವರು ಮಾತನಾಡಿ, ಡಿಸಿ ಗುರುದತ್ತ ಹೆಗಡೆ ಅವರೊಂದಿಗಿನ ಆಡಳಿತದ ಅನುಭವಗಳನ್ನು ನೆನಪಿಸಿಕೊಂಡರು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಗೆ ಏರಿ ಜಿಲ್ಲೆಗೆ ಅವರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಆಶಿಸಿ, ಶುಭ ಹಾರೈಸಿದರು.

 

ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಾದ ಕೆಯುಐಡಿಎಪ್‍ಸಿಯ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ತಹಶೀಲ್ದಾರ ಯಲ್ಲಪ್ಪ ಗೊಣೆನ್ನನವರ, ಎಚ್‍ಡಿಎಂಸಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ಶಿರಸ್ತೆದಾರ ಮಲ್ಲಿಕಾರ್ಜುನ ಸೋಲಗಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ವೆಂಕಟೇಶ ಹಟ್ಟಿಯವರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ವೇದಿಕೆಯಲ್ಲಿ ಎನ್.ಡಬ್ಲು.ಕೆಎಸ್‍ಆರ್‍ಟಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ ಎಸ್., ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮೂನಾ ರಾವುತ, ಉಪ ಪೆÇಲೀಸ ಆಯುಕ್ತ ರಾಜೀವ ಪಿ., ಹುಡಾ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಇದ್ದರು.

ಧಾರವಾಡ ತಹಸಿಲ್ದಾರ ಡಾ.ಡಿ.ಎಚ್.ಹೂಗಾರ ವಂದಿಸಿದರು. ವಿಜಯಲಕ್ಷ್ಮಿ ಎಚ್. ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ, ಆರೋಗ್ಯ, ಶಾಲಾ ಶಿಕ್ಷಣ, ವಾರ್ತಾ, ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಜಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸರಕಾರಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

Please follow and like us:

Leave a Reply

Your email address will not be published.

Back to top button
Close