News In KannadaNorth Karnataka

ಎಸ್.ಬಿ.ಆಯ್. ಬ್ಯಾಂಕಿಗೆ ದಂಡ ವಿಧಿಸಿದ ಆದೇಶ

ಧಾರವಾಡ, ಜೂನ್ 6:ಧಾರವಾಡ ಶಿವಗಿರಿ ನಿವಾಸಿ ಈ.ಸಿ. ವಿಜಯಕುಮಾರ ಎಂಬುವವರು ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೇದಾರರಾಗಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ಕೋರ್ಟನಲ್ಲಿ ಸೇವೆ ಸಲ್ಲಿಸುವಾಗ 2:31/08/2001 ರಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.

ತಮ್ಮ ಸೇವಾ ಅವಧಿಯಲ್ಲಿ ಅವರು ಸರ್ಕಾರದಿಂದ ಹೌಸಿಂಗ್ ಲೋನ್ ಪಡೆದುಕೊಂಡಿದ್ದರು. ನಿವೃತ್ತಿ ಹೊಂದುವ ಕಾಲಕ್ಕೆ ಅವರ ಗೃಹ ಸಾಲದ ಬಾಕಿ ರೂ.44,000/- ಉಳಿದಿತ್ತು. ಇವರ ಪಿಂಚಣಿ ನಿಗದಿ ಪಡಿಸುವಾಗ ಅಕೌಂಟಂಟ ಜನರಲ್ ಕಛೇರಿಯವರು ರೂ.44,000/-ಗಳನ್ನು ತಡೆ ಹಿಡಿದಿದ್ದರು. ಆ ಹಣವನ್ನು ಸರ್ಕಾರದ ಸಾಲದ ಖಾತೆಗೆ ತುಂಬುವಂತೆ ಜಿಲ್ಲಾ ಖಜಾನೆಗೆ ನಿರ್ದೇಶನ ಕೊಟ್ಟಿದ್ದರು.

ಅವರು ನಿವೃತ್ತಿ ನಂತರ ಧಾರವಾಡಕ್ಕೆ ಬಂದು ನೆಲೆಸಿದರು. ಕಾರಣ ಅವರ ಪಿಂಚಣಿ ದಾಖಲೆಗಳು ಜಿಲ್ಲಾ ಖಜಾನೆ ಕಛೇರಿಯವರು ಧಾರವಾಡದ ಸ್ಟೇಟ್ ಬ್ಯಾಂಕಿನ ಮುಖ್ಯ ಶಾಖೆಗೆ ಮುಂದಿನ ಕ್ರಮಕ್ಕಾಗಿ 2001-02 ರಲ್ಲಿ ಕಳಿಸಿದ್ದರು. ಆಗಿನಿಂದ ದೂರುದಾರನ ಖಾತೆ ಧಾರವಾಡದ ಮುಖ್ಯ ಶಾಖೆಯಲ್ಲಿ ಇದ್ದರೂ ಮತ್ತು ಅವರ ಖಾತೆಯಲ್ಲಿ ಸಾಕಷ್ಟು ಹಣ ಇದ್ದರೂ ಗೃಹ ಸಾಲದ ಬಾಕಿ ರೂ.44,000/-ಗಳನ್ನು ಅವರಖಾತೆಯಿಂದ ತೆಗೆದು ಸರ್ಕಾರದ ಖಾತೆಗೆ ಡಿ.ಡಿ. ಮೂಲಕ ಸಂದಾಯ ಮಾಡಲು ಬ್ಯಾಂಕಿಗೆ ನಿರ್ದೇಶನ ಇತ್ತು. ಆದರೆ ಎದುರುದಾರ ಸ್ಟೇಟ್ ಬ್ಯಾಂಕಿನವರು 2002-03 ರಿಂದ ಇಲ್ಲಿಯವರೆಗೆ ದೂರುದಾರರ ಗೃಹ ಸಾಲದ ಮರು ಪಾವತಿಗಾಗಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.01/08/2012 ರಂದು ಅಕೌಂಟೆಂಟ್ ಜನರಲ್ಬೆಂಗಳೂರು ರವರು ಎದುರುದಾರ ಬ್ಯಾಂಕಿಗೆರೂ.44,000/-ಗಳನ್ನು ದೂರುದಾರ ಸರ್ಕಾರದ ಖಾತೆಗೆ ಜಮಾ ಮಾಡಿದ್ದರ ಕುರಿತು ದೃಢೀಕರಿಸುವಂತೆ ಪತ್ರ ಬರೆದಿದ್ದರು. ಆದರೆ ಎದುರುದಾರ ಬ್ಯಾಂಕಿನವರು ಗೃಹ ಸಾಲ ಮರುಪಾವತಿಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಈ ವಿಷಯವಾಗಿ ದೂರುದಾರನು ಸಾಕಷ್ಟು ಸಲ ಬ್ಯಾಂಕಿಗೆ ವಿಚಾರಿಸಿದಾಗ ದೂರುದಾರರ ವಿನಂತಿಗೆ ಬ್ಯಾಂಕಿನವರು ಸ್ಪಂದಿಸಿರಲಿಲ್ಲ. ದೂರುದಾರನ ಗೃಹ ಸಾಲದ ಬಾಕಿ ಇನ್ನೂ ಪಾವತಿ ಆಗದಿರುವ ಬಗ್ಗೆ ಬೆಂಗಳೂರಿನ ಎ.ಜಿ.ಕಛೇರಿಯವರು ಹೈ ಕೋರ್ಟಗೆ ದಿ:23/08/2022ರಂದು ಪತ್ರ ಬರೆದಿದ್ದರು. ಅದನ್ನುಆಧರಿಸಿ ಗೃಹ ಸಾಲದ ಬಾಕಿ ಮೊತ್ತ ತಕ್ಷಣ ಮರುಪಾವತಿಸುವಂತೆ ಹೈ ಕೋರ್ಟ ನಿಂದ ದೂರುದಾರನಿಗೆ ಸೂಚನೆ ಬಂತು. ರೂ.44,000/- ಗೃಹ ಸಾಲದ ಬಾಕಿಯ ಮೇಲೆ ಬಡ್ಡಿ ವಗೈರ ಸೇರಿಸಿ ಒಟ್ಟು 1,61,469/-ಗಳನ್ನು ದೂರುದಾರ ಚಲನ ಮೂಲಕ ಸರ್ಕಾರಕ್ಕೆ ಪಾವತಿಸಿ ಹೈ ಕೋರ್ಟಗೆ ಆ ಬಗ್ಗೆ ಮಾಹಿತಿ ನೀಡಿದ್ದರು.

2001-02ರಲ್ಲಿ ತನ್ನ ಪಿಂಚಣಿ ನಿಗದಿಪಡಿಸುವಾಗ ರೂ.44,000/- ಗೃಹ ಸಾಲದ ಬಾಕಿಯನ್ನು ಎ.ಜಿ. ಕಛೇರಿಯವರು ತಡೆಹಿಡಿದು ಅದನ್ನು ಸರ್ಕಾರಕ್ಕೆ

ಪಾವತಿಸುವಂತೆ ಸ್ಟೇಟ್ ಬ್ಯಾಂಕಿಗೆ ನಿರ್ದೇಶನ ಇದ್ದರೂ ಆಗಿನಿಂದ 2022-23ನೇ ಇಸವಿಯವರೆಗೆ ಬ್ಯಾಂಕಿನವರು ಯಾವುದೇ ಕ್ರಮ ಕೈಗೊಳ್ಳದ್ದರಿಂದ ರೂ.44,000/- ಬದಲಿಗೆ ತಾನು ರೂ.1,61,469/-ಗಳನ್ನು ತುಂಬಬೇಕಾದ ಪರಿಸ್ಥಿತಿ ಬಂತು. ಎದುರುದಾರ ಸ್ಟೇಟ್ ಬ್ಯಾಂಕಿನವರ ನಿರ್ಲಕ್ಷತನದ ಧೋರಣೆಯಿಂದ ತನಗೆ ತೊಂದರೆಯಾಗಿ ಅನ್ಯಾಯವಾಗಿದೆ. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:06/03/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರ ದಿ:31/08/2001 ರಂದು ನ್ಯಾಯಾಂಗ ಇಲಾಖೆಯ ಶಿರಸ್ತೇದಾರನಾಗಿ ಸ್ವಯಂ ನಿವೃತ್ತಿ ಹೊಂದಿದ್ದಾನೆ. ಅವನು ಸೇವೆ ಸಲ್ಲಿಸುವಾಗ ಪಡೆದಿದ್ದ ಗೃಹ ಸಾಲದ ರೂ.44,000/-ಗಳ ಬಾಕಿಯನ್ನು ಪಿಂಚಣಿ ನಿಗದಿಪಡಿಸುವಾಗ ಬೆಂಗಳೂರಿನ ಎ.ಜಿ. ಕಛೇರಿಯವರು ತಡೆ ಹಿಡಿದು ಆ ಹಣವನ್ನು ದೂರುದಾರನ ಸಾಲದ ಖಾತೆಗೆ ಸರ್ಕಾರಕ್ಕೆ ಪಾವತಿಸುವಂತೆ ನಿರ್ದೇಶಿಸಿದ್ದರು. 2001-02 ನೇ ಇಸವಿಯಿಂದ ದೂರುದಾರನ ಬ್ಯಾಂಕ್ ಖಾತೆ ಧಾರವಾಡದ ಮುಖ್ಯ ಶಾಖೆಯಲ್ಲಿ ಇತ್ತು. ದೂರುದಾರನ ಸ್ವಯಂ ನಿವೃತ್ತಿಯ ಪಿಂಚಣಿ ಹಣ ಅದೇ ಖಾತೆಯಲ್ಲಿ ಜಮಾ ಆಗಿತ್ತು. ಆಹಣದಲ್ಲಿ ರೂ.44,000/-ಗೆ ಸರ್ಕಾರದ ಹೆಸರಿಗೆ ಡಿ.ಡಿ. ತೆಗೆದು ಕಳುಹಿಸುವುದು ಎದುರುದಾರ ಬ್ಯಾಂಕಿನವರು ಕರ್ತವ್ಯವಾಗಿತ್ತು. ಆದರೆ 2001 ರಿಂದ 2022 ರವರೆಗೆ ಹಲವು ಬಾರಿ ದೂರುದಾರ ಎದುರುದಾರ ಬ್ಯಾಂಕಿಗೆ ಹೋಗಿ ವಿನಂತಿಸಿದರೂ ಅವರು ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬ್ಯಾಂಕಿನವರ ಕರ್ತವ್ಯ ಲೋಪವಾಗುತ್ತದೆ. ಅಂತಹ ಬ್ಯಾಂಕಿನವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಹೈ ಕೋರ್ಟ ನಿರ್ದೇಶನದಂತೆ ದಿ:30/09/2022 ರಂದು ದೂರುದಾರ ಚಲನ ಮೂಲಕ ಸರ್ಕಾರಕ್ಕೆ ಬಡ್ಡಿ ಸಮೇತ ಕಟ್ಟಿರುವ ರೂ.1,61,469/- ಮತ್ತು ಅದರ ಮೇಲೆ ಆ ದಿನಾಂಕದಿಂದ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಸಂದಾಯ ಮಾಡುವಂತೆ ಆಯೋಗ ಎದುರುದಾರ ಸ್ಟೇಟ್ ಬ್ಯಾಂಕಿಗೆ ನಿರ್ದೇಶನ ನೀಡಿದೆ. ಹಿರಿಯ ನಾಗರಿಕನಾದ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಬ್ಯಾಂಕಿನವರು ಅವರಿಗೆ ರೂ.1 ಲಕ್ಷ ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಬ್ಯಾಂಕಿಗೆ ಆದೇಶಿಸಿದೆ.

Please follow and like us:

One Comment

Leave a Reply

Your email address will not be published.

Back to top button
Close