ಹುಬ್ಬಳ್ಳಿ: ಹಳೆ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಕೌಂಟರ್ ಆರಂಭ
ಹುಬ್ಬಳ್ಳಿ:ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ನ್ನು ಸೋಮವಾರದಿಂದ ಮತ್ತೆ ಆರಂಭಿಸಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹಳೆ ಬಸ್ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಹಳೆಯ ಕಟ್ಟಡವನ್ನು ತೆರವುಗೊಳಿಸಲಾಗಿದೆ.ಹೀಗಾಗಿ ಬಸ್ ಗಳು ಒಳಬರುವ ದ್ವಾರಲ್ಲಿದ್ದ ಮುಂಗಡ ಟಿಕೆಟ್ ಬುಕಿಂಗ್ ಕೌಂಟರ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಪ್ರಸ್ತುತ ಶ್ರಾವಣ ಮಾಸ ಹಾಗೂ ಗಣೇಶ ಹಬ್ಬ ಹತ್ತಿರ ಬರುತ್ತಿದ್ದು ಜನರ ಓಡಾಟ ಹೆಚ್ಚಾಗುತ್ತಿದೆ. ಆದ್ದರಿಂದ ಸದರಿ ಕೇಂದ್ರವನ್ನು ಪುನರ್ ಆರಂಭಿಸುವಂತೆ ಚೆನ್ನಮ್ಮ ಸರ್ಕಲ್, ಹಳೆ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವ್ಯಾಪಾರಸ್ಥರು, ಉದ್ಯಮಿಗಳು ಮತ್ತಿತರರು ಮನವಿ ಮಾಡಿಕೊಂಡಿದ್ದರು. ಸಾರ್ವಜನಿಕರ ಬೇಡಿಕೆಯ ಮೇರೆಗೆ ಬಸ್ ಗಳು ಹೊರ ಹೋಗುವ ದ್ವಾರದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆಯಲಾಗಿದೆ. ಇದರೊಂದಿಗೆ ಹೊಸೂರು ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣಗಳಲ್ಲಿನ ಮುಂಗಡ ಬುಕ್ಕಿಂಗ್ ಕೌಂಟರ್ ಗಳೂ ಸಹ ಮುಂದುವರೆಯಲಿವೆ.
ಮಾಸಿಕ ಪಾಸ್ ಪಡೆಯುವ ಪ್ರಯಾಣಿಕರು ಹಾಗೂ ಸರಕು ಸಾಗಾಣಿಕೆ ಮಾಡುವ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸೂರು ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣಗಳಲ್ಲಿ ತೆರೆಯಲಾಗಿರುವ ಕಾರ್ಗೋ ಕೇಂದ್ರ ಮತ್ತು ಮಾಸಿಕ ರಿಯಾಯಿತಿ ಪಾಸ್ ಕೇಂದ್ರಗಳು ಸಹ ಬೆಳಿಗ್ಗೆಯಿಂದ ರಾತ್ರಿ ಯವರೆಗೆ ಕಾರ್ಯ ನಿರ್ವಹಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
