35.58 ರೂ. ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ಬಸ್ ನಿಲ್ದಾಣ ನಿರ್ಮಾಣ: ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ

ಹುಬ್ಬಳ್ಳಿ: ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಂಗಡಿ ಮಳಿಗೆಗಳು, ತಿಂಡಿ ಪದಾರ್ಥಗಳು ಹಾಗೂ ಆಹಾರ ಸೌಲಭ್ಯ ದೊರೆಯುವಂತೆ ಮೂಲ ಸೌಕರ್ಯದಿಂದ ಕೂಡಿದ ಸುಸಜ್ಜಿತ ನೂತನ ಬಸ್ ನಿಲ್ದಾಣವನ್ನು 35.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿಯು 18 ತಿಂಗಳಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ ಅವರು ಹೇಳಿದರು.
ಹಳೇ ಬಸ್ ನಿಲ್ದಾಣದ ಬಳಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ನೂತನ ಬಸ್ ನಿಲ್ದಾಣದ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು.
ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುಣಮಟ್ಟದ ಕಾರ್ಯ ಮಾಡಲು ಗುತ್ತಿಗೆದಾರರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಪುನಃ ಕಟ್ಟಡದ ಪ್ರಗತಿ ಪರಿಶೀಲನೆ ಮಾಡಲಾಗುವುದು.
ಹೊಸೂರ ಬಸ್ ನಿಲ್ದಾಣ ನಾನು ಅಧಿಕಾರಕ್ಕೆ ಬರುವ ಮುಂಚೆಯೇ ನಿರ್ಮಿಸಲಾಗಿದ್ದು, ಅದರಂತೆ ಈ ನೂತನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ.
ಪಾಲಿಕೆ ಚುನಾವಣೆಗಾಗಿ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಧಿ ನೀಡಲಾಗಿದೆ. ಅವರು ನೀಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಪಾಲಿಕೆ ಚುನಾವಣೆಯಾಗುವುದು ಸರ್ಕಾರದ ಅಭಿಲಾಶೆಯಾಗಿದೆ. ಹಾಗಾಗಿ ಬೆಳಗಾವಿ, ಗುಲ್ಬರ್ಗ, ಬಿಜಾಪೂರ ಹಾಗೂ ಹುಬ್ಬಳ್ಳಿ ಈ ನಾಲ್ಕು ಮಹಾನಗರಗಳಲ್ಲಿ ಪಾಲಿಕೆ ಚುನಾವಣೆಯಾಗಲಿವೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಪ್ರದೀಪ್ ಶೆಟ್ಟರ್, ಅರವಿಂದ್ ಬೆಲ್ಲದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
