ನೀರು ಸರಬರಾಜನ್ನು ಎಲ್ ಅಂಡ್ ಟಿ ಕಂಪನಿಗೆ ಹಸ್ತಾಂತರ

ಮೂರನೇ ಹಂತದ ಕಾಮಗಾರಿಯನ್ನು ಬೇಗನೆ ಮುಗಿಸುವಂತೆ ಎಲ್ ಅಂಡ್ ಟಿ ಕಂಪನಿಗೆ ಸೂಚನೆ
-ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ
ಹುಬ್ಬಳ್ಳಿ ,ಏ.28: ದೇಶದಲ್ಲಿ ಮೊದಲ ಬಾರಿಗೆ 10 ಲಕ್ಷ ಜನರಿಗೆ 24*7 ನೀರು ಸರಬರಾಜು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಮೊದಲ & ಎರಡನೇ ಹಂತದಲ್ಲಿ ಕ್ರಮವಾಗಿ 11 ಮತ್ತು 25 ವಾರ್ಡ್ ಗಳು ಸೇರಿ ಒಟ್ಟು 36 ವಾರ್ಡ್ ಗಳ ನೀರು ಸರಬರಾಜನ್ನು ಎಲ್ ಅಂಡ್ ಟಿ ಕಂಪನಿಗೆ ಹಸ್ತಾಂತರ ಮಾಡಲಾಗಿದೆ. ಮುಂದಿನ ಹಂತದ ಕಾಮಗಾರಿಗಳನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ ಹೇಳಿದರು.
ಇಂದು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ 24X7 ನಿರಂತರ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಹಸ್ತಾಂತರ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಧಾರವಾಡ ಉಚ್ಛ ನ್ಯಾಯಾಲಯ ಹೊರಡಿಸಿದ ಮಧ್ಯಂತರ ಆದೇಶದ ಅನ್ವಯ ಹೊರ ಗುತ್ತಿಗೆ ನೌಕರರ ನೋಂದಣಿ ಕಾರ್ಯವನ್ನು ಎಲ್ ಅಂಡ್ ಟಿ ಆಪರೇಟರ್ ಅವರು ಆರಂಭಿಸಿದಾಗ ನೌಕರರು ನೋಂದಣಿ ಕಾರ್ಯದಲ್ಲಿ ಭಾಗಿಯಾಗಲಿಲ್ಲ. ಹೊರ ಗುತ್ತಿಗೆ ನೌಕಕರ ಸಂಘದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಮುಷ್ಕರವನ್ನು ಮೊಟಕುಗೊಳಿಸುವಂತೆ ತಿಳಿಸಲಾಗಿದೆ. ಅಮ್ಮಿನಭಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ನೀರು ಸರಬರಾಜು ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ನೀರು ಸರಬರಾಜಿನಲ್ಲಿ ವ್ಯತ್ಯಾಸವಾಗಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿದೆ ಎಂದರು.
ಬೆಳಗಾವಿ, ಕಲ್ಬುರ್ಗಿ ಜಿಲ್ಲೆಯಲ್ಲಿ ಹೊರ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಕೆಯುಐಡಿಏಫ್ ಸಿ, ಎಲ್ ಅಂಡ್ ಟಿ ಹಾಗೂ ಪಾಲಿಕೆ ಜೊತೆ ನೌಕರರು ಕೈ ಜೋಡಿಸಬೇಕಾಗಿದೆ. ನೌಕರರು ಎರಡು ವರ್ಷದವರೆಗೆ ಕೆಲಸ ಮಾಡಿ, ನಂತರ ಮುಂದುವರೆಯುವುದು ಹಾಗೂ ಕೆಲಸ ಬಿಟ್ಟು ಹೋಗುವ ಅವಕಾಶವನ್ನು ನೀಡಲಾಗಿದೆ. ಪಾಲಿಕೆ ಕೊಡುತ್ತಿದ್ದ ಸಂಬಳವನ್ನು ಎಲ್ ಅಂಡ್ ಟಿ ಅವರು ನೀಡಲಿದ್ದಾರೆ. ಮೂರನೇ ಹಂತದ ಕಾಮಗಾರಿಯನ್ನು ಬೇಗನೆ ಮುಗಿಸಬೇಕು ಎಂದು ಎಲ್ ಅಂಡ್ ಟಿ ಅವರಿಗೆ ತಿಳಿಸಲಾಗುವುದು. ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆಯುಡಬ್ಲುಎಸ್ ಎಂಪಿ)ಯನ್ನು ಕಾಮಗಾರಿ ನಡೆಯುತ್ತಿದೆ. ರೂ.1,207 ಕೋಟಿ ವೆಚ್ಚದ ಯೋಜನೆಯಾಗಿದೆ. ಜಲಮಂಡಳಿ ಸೇವಾವಧಿ ಏ.25ಕ್ಕೆ ಅಂತ್ಯವಾಗಿದ್ದು, ಏ.26ರಿಂದ ಚನ್ನೈ ಮೂಲದ ಎಲ್ ಅಂಡ್ ಟಿ ಅವರಿಗೆ ಮುಂದಿನ 12 ವರ್ಷಗಳ ಗುತ್ತಿಗೆಯನ್ನು ನೀಡಲಾಗಿದೆ. 2026 ರೊಳಗೆ ಎಲ್ಲಾ 82 ವಾರ್ಡ್ ಗಳಿಗೆ 24 * 7 ನೀರು ಸರಬರಾಜು ಮಾಡಲಾಗುತ್ತದೆ. ಹಸ್ತಾಂತರ ಮಾಡುವಾಗ ಸ್ವಲ್ಪಮಟ್ಟಿಗೆ ಸಮಸ್ಯೆಯಾಗಲಿದೆ. ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು. ಎಲ್ ಅಂಡ್ ಟಿ ಅವರಿಗೆ ಹಸ್ತಾಂತರ ಮಾಡಿದ ಬಳಿಕ ಜಲಮಂಡಳಿ ಒಂದು ವಾರ ಅವರೊಂದಿಗೆ ಕೆಲಸ ನಿರ್ವಹಿಸಲಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಭದ್ರತೆ ನೀಡುವಂತೆ ಪತ್ರ ಬರೆಯಲಾಗಿದೆ. ನೀರು ಸರಬರಾಜಿನಲ್ಲಿ ಅಸ್ತವ್ಯಸ್ತ ಆಗಬಾರದು ಎಂದು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. 27 ಟ್ಯಾಂಕರ್ ಗಳ ಮೂಲಕ ಅವಳಿ ನಗರಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರಸಾಗರ ಜಲಾಶಯದ ಮೂಲಕ ನೀರು ಪೂರೈಸಲಾಗುತ್ತಿದೆ. ವಿದ್ಯುತ್ ವ್ಯತ್ಯಯದಿಂದ ನೀರು ಸರಬರಾಜಿನಲ್ಲಿ ಸಮಸ್ಯೆಯಾಗಿದೆ. ಈಗಾಗಲೇ ಹೆಸ್ಕಾಂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಕೆಯುಐಡಿಎಫಸಿ ಮುಖ್ಯ ಅಭಿಯಂತರ ಹಾಗೂ ಕಾರ್ಯ ನಿರ್ವಾಹಕ ಅಭಿಯಂತರರಾದ ಶರಣಪ್ಪ ಸುಲಗಂಟೆ ಸೇರಿದಂತೆ ಇತರರು ಇದ್ದರು.
