NewsNews In KannadaNorth Karnataka

ನಿಕಟ ಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಬೀಳ್ಕೊಡುಗೆ

ಧಾರವಾಡ ಜಿಲ್ಲೆಯ ಸೇವೆ ಅವಿಸ್ಮರಣೀಯ
ಜಿಲ್ಲಾಡಳಿತದ ಸಾಂಘಿಕ ಪ್ರಯತ್ನದಿಂದ ದಕ್ಷ ಆಡಳಿತ ನಿರ್ವಹಿಸಿದ ತೃಪ್ತಿ ”ನಿತೇಶ್ ಪಾಟೀಲ”

ಧಾರವಾಡ ಮೇ.14: ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳ ತೀವ್ರತೆ,ಚುನಾವಣೆ,ಪ್ರವಾಹ ನಿರ್ವಹಣೆ ಸೇರಿದಂತೆ ಅನೇಕ ಸವಾಲುಗಳನ್ನು ಜಿಲ್ಲೆಯಲ್ಲಿ ಸಾಂಘಿಕ ಪ್ರಯತ್ನದೊಂದಿಗೆ ನಿರ್ವಹಿಸಿದ ತೃಪ್ತಿಯಿದೆ. ಧಾರವಾಡ ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರಇಲ್ಲಿನ ಕರ್ತವ್ಯ ನಿರ್ವಹಣೆಯು ಭವಿಷ್ಯದ ವೃತ್ತಿ ಜೀವನಕ್ಕೆ ಹೊಸ ಭರವಸೆ ತಂದುಕೊಟ್ಟಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.

ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಇಂದು ಏರ್ಪಡಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು,

ಧಾರವಾಡದಲ್ಲಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ, ಅಧಿಕಾರವಹಿಸಿಕೊಂಡ ಕೂಡಲೇ ಕೋವಿಡ್ ಅಲೆ ತೀವ್ರಗೊಳ್ಳತೊಡಗಿತು, ಕೋವಿಡ್ ಕೇರ್ ಸೆಂಟರುಗಳ ಸ್ಥಾಪನೆ,ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯುವ ಸವಾಲಿನ ಕಾರ್ಯವನ್ನು ಜಿಲ್ಲೆಯ ಆಡಳಿತದ ಎಲ್ಲಾ ವಿಭಾಗಗಳ ನೆರವಿನೊಂದಿಗೆ ಸಮರ್ಥವಾಗಿ ನಿರ್ವಹಿಸಿದ ತೃಪ್ತಿಯಿದೆ.ವಿಧಾನಪರಿಷತ್,ಗ್ರಾಮ ಪಂಚಾಯತ, ಮಹಾನಗರಪಾಲಿಕೆ ಚುನಾವಣೆಗಳು,ಕಂದಾಯ ಸಚಿವರ ಛಬ್ಬಿ ಗ್ರಾಮ ವಾಸ್ತವ್ಯ,ಪ್ರವಾಹ ನಿರ್ವಹಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಮಾಧಾನವಿದೆ.ಹುಬ್ಬಳ್ಳಿಯ ಕಿಮ್ಸ್ ಮೇಲೆ ಸುತ್ತಲಿನ 7-8 ಜಿಲ್ಲೆಗಳ ಅವಲಂಬನೆ ಇದ್ದುದರಿಂದ ಪ್ರತಿನಿತ್ಯ ದೊಡ್ಡ ಪ್ರಮಾಣದ ವೈದ್ಯಕೀಯ ಆಕ್ಸಿಜನ್ ಸರಬರಾಜನ್ನು ಸಮರೋಪಾದಿಯಲ್ಲಿ ಸರಬರಾಜು ಮಾಡಿದ್ದು ಸಾಮಾನ್ಯ ಸವಾಲು ಆಗಿರಲಿಲ್ಲ.ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಮರ್ಥವಾಗಿ ಎದುರಿಸಿದ್ದು ವೃತ್ತಿಜೀವನಕ್ಕೆ ಹೊಸ ಭರವಸೆ ತಂದು ಕೊಟ್ಟಿದೆ.ಸಂಕಷ್ಟದ ದಿನಗಳು ಈಗ ಕಳೆದಿವೆ,ಜಿಲ್ಲೆಯ ಜನರಿಗೆ ಧಾರವಾಡ ಉತ್ಸವದಂತಹ ಸಾಂಸ್ಕೃತಿಕ ಹಬ್ಬ ನೀಡುವ ಕನಸು ಇತ್ತು,ಬರುವ ದಿನಗಳಲ್ಲಿ ಆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು. ಭೂಮಿ,ವಸತಿ ಯೋಜನೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವುದಕ್ಕೆ ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಂಘಿಕ ಪ್ರಯತ್ನ ಕಾರಣವಾಗಿದೆ.ನೂತನವಾಗಿ ಅಧಿಕಾರ ಸ್ವೀಕರಿಸಿರುವ ಗುರುದತ್ತ ಹೆಗಡೆ ಅವರು,ಕನ್ನಡದಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದು ದೇಶಕ್ಕೆ 25 ನೇ ರಾಂಕ್ ಪಡೆದು ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.ಸ್ಥಳೀಯರಾಗಿದ್ದರೂ ಕೂಡ ವೃತ್ತಿ ಜೀವನದಲ್ಲಿ ತಟಸ್ಥತೆ,ದಕ್ಷತೆ ಕಾಯ್ದುಕೊಂಡವರಾಗಿದ್ದಾರೆ ಅವರ ಅಧಿಕಾರಾವಧಿಯಲ್ಲಿಯೂ ಧಾರವಾಡ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಸಾಧಿಸಲಿ ಎಂದರು.

ಇದೇ ಸಂದರ್ಭದಲ್ಲಿ ಸ್ವಾಗತ ಸ್ವೀಕರಿಸಿದ ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ನಿತೇಶ್ ಪಾಟೀಲ‌ ಅವರು ತಾವೇ ಸ್ವತಃ ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಂಡು,ಇಡೀ ತಂಡದಿಂದ ಕೆಲಸ ಮಾಡುವಲ್ಲಿ ಮಾದರಿ ಕಾರ್ಯನಿರ್ವಹಿಸಿದ್ದಾರೆ.ಆಡಳಿತಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದ್ದಾರೆ.ಅವರ ಮಟ್ಟಕ್ಕೆ ಕಾರ್ಯನಿರ್ವಹಿಸುವ ಸವಾಲು ತಮ್ಮ ಮುಂದಿದೆ. ಅವರ ಮಾರ್ಗದರ್ಶನದೊಂದಿಗೆ ಜಿಲ್ಲೆಯನ್ನು ಮುನ್ನಡೆಸೋಣ.ಇದೀಗ ಕಷ್ಟದ ದಿನಗಳು ಕಳೆದಿದ್ದು ,ಮುಂಬರುವ ದಿನಗಳಲ್ಲಿ ಅರ್ಥಪೂರ್ಣ ಧಾರವಾಡ ಉತ್ಸವ ಆಚರಿಸೋಣ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ,ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ,ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ,ಕೃಷಿ ವಿ.ವಿ.ಕುಲಸಚಿವ ಶಿವಾನಂದ ಕರಾಳೆ,ಉಪವಿಭಾಗಾಧಿಕಾರಿ ಅಶೋಕ ತೇಲಿ, ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡ್ರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಸಿ.ಕರಿಗೌಡರ,ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ ಮತ್ತಿತರರು ಮಾತನಾಡಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಐಶ್ವರ್ಯ ನಿತೇಶ್ ದಂಪತಿಗಳನ್ನು ಸತ್ಕರಿಸಿ,ಗೌರವಿಸಲಾಯಿತು.

ವೇದಿಕೆಯಲ್ಲಿ ಡಿಸಿಪಿ ಸಾಹಿಲ್ ಬಾಗ್ಲಾ ಇದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ತಹಶಿಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ನೌಕೃಉ, ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿ, ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ ಪಾಟೀಲ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಾರಾಮನ್ ಕಾರ್ಯಕ್ರಮ ನಿರೂಪಿಸಿದರು.

Please follow and like us:

Leave a Reply

Your email address will not be published.

Back to top button
Close