ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ಮಾಧ್ಯಮ ಕಾರ್ಯಾಗಾರ ಸಂವಾದ

ಧಾರವಾಡ, ಫೆ.09: ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ರಾಯಾಪುರದಲ್ಲಿ ಇಂದು ನವೀಕರಿಸುಬಹುದಾದ ಇಂಧನ ಮತ್ತು ಉಳಿತಾಯ ಕುರಿತ ಮಾಧ್ಯಮ ಕಾರ್ಯಾಗಾರ ಮತ್ತು ಸಂವಾದ ಜರುಗಿತು.
ನಿಗಮದ ಪ್ರಾಂತೀಯ ಕಚೇರಿಯ ಸಹಾಯಕ ನಿರ್ದೇಶಕಿ ಸವಿತಾ ಎಸ್.ಮೇಟಿ ಮಾತನಾಡಿ, ಪರ್ಯಾಯ ಇಂಧನ ಮೂಲಗಳಾದ ಸೌರಶಕ್ತಿ, ಪವನ ವಿದ್ಯುತ್, ಕಿರು ಜಲವಿದ್ಯುತ್, ಜೈವಿಕ ವಿದ್ಯುತ್, ಸಹ ವಿದ್ಯುತ್ ಹಾಗೂ ಘನತ್ಯಾಜ್ಯ ಮೂಲಕ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನದ ,ಸಂಶೋಧನೆ ಹಾಗೂ ಬಳಕೆ ಪ್ರೋತ್ಸಾಹಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮವು ನಿರಂತರವಾಗಿ ಪ್ರಯತ್ನಿಸುತ್ತಿದೆ. ಎಲ್ಇಡಿ ಬೀದಿ ದೀಪಗಳ ಅಳವಡಿಕೆ,ಕಟ್ಟಡಗಳಲ್ಲಿ ಸಮರ್ಥವಾಗಿ ನೈಸರ್ಗಿಕ ಶಕ್ತಿಯ ಬಳಕೆ,ಸರ್ಕಾರಿ ಶಾಲೆ,ಕಾಲೇಜುಗಳಲ್ಲಿ ವಿದ್ಯುತ್ ಉಳಿತಾಯ,ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಸೌರ ನೀರಾವರಿ ವಿದ್ಯುತ್ ಬಳಕೆಯ ವಿಕೇಂದ್ರೀಕರಣ ಮಾಡಲಾಗುತ್ತಿದೆ.ಕೆಲವು ಖಾಸಗಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳ ಮೂಲಕ ರೈತರನ್ನು ವಂಚಿಸುವ ಪ್ರಯತ್ನ ಮಾಡುತ್ತಿವೆ ಅವುಗಳಿಗೆ ಜನತೆ ಮಾರು ಹೋಗಬಾರದು,ಮೋಸಕ್ಕೆ ಒಳಗಾಗಬಾರದು ಎಂದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಡೊಳ್ಳಿನ ಮಾತನಾಡಿ, ಜಾಗತಿಕವಾಗಿ ಸವಾಲಾಗಿ ಪರಿಣಮಿಸಿರುವ ತಾಪಮಾನ ಏರಿಕೆ, ಹವಾಮಾನ ಬದಲಾವಣೆಗೆ ಕಾರಣವಾಗಿರುವ ಅಂಶಗಳ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲಿ, ಜನಸಾಮಾನ್ಯರನ್ನು ಎಚ್ಚರಿಸುತ್ತಿವೆ.ಪರ್ಯಾಯ,ಪರಿಸರ ಸ್ನೇಹಿ ಇಂಧನಗಳ ಕುರಿತು ಮಾಧ್ಯಮ ಕಾರ್ಯಾಗಾರ ನಡೆಯುತ್ತಿರುವುದು ಸಂತಸ ಎಂದರು.
ಧಾರವಾಡ ಮೀಡಿಯಾ ಕ್ಲಬ್ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಮಾತನಾಡಿ, ಆತ್ಮನಿರ್ಭರ ಭಾರತ ಕಲ್ಪನೆಯ ಮೂಲಕ ದೇಶ ಎಲ್ಲ ರಂಗಗಳಲ್ಲಿ ಸ್ವಾವಲಂಬಿಯಾಗುವ ಹಾದಿಯಲ್ಲಿ ಸಾಗಿದೆ.ವಿದ್ಯುತ್ ಅಭಾವ ನೀಗಿಸಲು ಪರ್ಯಾಯ ಶಕ್ತಿಗಳ ಬಳಕೆ ಹೆಚ್ಚಾಗಬೇಕು ಎಂದರು.
ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಪ್ರಶಾಂತ ರೇವಣಕರ,ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ. ಉಪಪ್ರಧಾನ ವ್ಯವಸ್ಥಾಪಕ ಪ್ರಸನ್ನ ಹೆಗಡೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಬಸವರಾಜ ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹುಬ್ಬಳ್ಳಿ ಧಾರವಾಡ ಅವಳಿನಗರದ ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಶ್ರೀಸೌಮ್ಯ ಪ್ರಾರ್ಥಿಸಿದರು.ಸುವರ್ಣಾ ಕಾರ್ಯಕ್ರಮ ನಿರೂಪಿಸಿದರು.
