NewsNews In Kannada

ಬಸ್ ನಿಲ್ದಾಣಗಳಲ್ಲಿ ಎಟಿಎಂ ಕೌಂಟರ್ ಆರಂಭ

ಹುಬ್ಬಳ್ಳಿ: ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಎಟಿಎಂ ಕೌಂಟರ್ ಆರಂಭಿಸಲಾಗಿದೆ.

ನಗರದ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಪ್ರತಿದಿನ 1365 ಹಾಗೂ ಹೊಸೂರು ಬಸ್ ನಿಲ್ದಾಣದಿಂದ 1008 ಬಸ್ ಗಳು ಬಂದು ಹೋಗುತ್ತವೆ. ಈ ಬಸ್ ನಿಲ್ದಾಣಗಳಿಗೆ ನಿತ್ಯ 25ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಅದೇ ರೀತಿ ನವಲಗುಂದ, ಅಣ್ಣಿಗೇರಿ ತಡಸ,ಕಲಘಟಗಿ, ಕುಂದಗೋಳ ಮತ್ತಿತರ ಬಸ್ ನಿಲ್ದಾಣಗಳಿಗೂ ಸಹ ಸಾವಿರಾರು ಜನರು ಬರುತ್ತಾರೆ.

ಇಲ್ಲಿಯವರೆಗೆ ಬಸ್ ನಿಲ್ದಾಣಗಳಲ್ಲಿ ಹಾಗೂ ಸುತ್ತಮುತ್ತ ಹತ್ತಿರದಲ್ಲಿ ಎಟಿಎಂ ಕೇಂದ್ರವಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ ನಿಲ್ದಾಣಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಎಟಿಎಂ ಕೌಂಟರ್ ಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ. ಮೊದಲ ಹಂತದಲ್ಲಿ ನಗರದ ಹೊಸೂರು ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣ ದಲ್ಲಿ ಎಟಿಎಂ ಕೌಂಟರ್ ಆರಂಭಿಸಲಾಗಿದೆ. ಇದರಿಂದ ಜಿಲ್ಲೆಯ, ರಾಜ್ಯದ ಹೊರ ಜಿಲ್ಲೆಗಳ ಹಾಗೂ ಅಂತರ ರಾಜ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ನವಲಗುಂದ ಹಾಗೂ ಕಲಘಟಗಿ ಬಸ್ ನಿಲ್ದಾಣಗಳಲ್ಲಿ ಸಹ ಎಟಿಎಂ ಕೌಂಟರ್ ಕಾರ್ಯಾರಂಭ ಗೊಂಡಿವೆ. ಸಾರ್ವಜನಿಕ ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಇತರೆ ಬಸ್ ನಿಲ್ದಾಣಗಳಲ್ಲೂ ಸಹ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close