News In KannadaNorth Karnataka

ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಜು.23 ರಂದು 24 ಮನೆಗಳು ಭಾಗಶಃ ಹಾನಿ

ಧಾರವಾಡ, ಜು.23: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಜುಲೈ 23 ರ ಬೆಳಿಗ್ಗೆ 8 ಗಂಟೆಯವರೆಗೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿನ ಸುಮಾರು 24 ಮನೆಗಳಿಗೆ ಹಾನಿ ಆಗಿದ್ದು, ಗೊಡೆ ಕುಸಿದು 1 ಜಾನುವಾರ ಜೀವ ಹಾನಿ ಆಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.ನರಂತರ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ 2,ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 1, ಅಳ್ನಾವರ ತಾಲೂಕಿನಲ್ಲಿ 2, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 2, ಕುಂದಗೋಳ ತಾಲೂಕಿನಲ್ಲಿ 6, ಅಣ್ಣಿಗೇರಿ ತಾಲೂಕಿನಲ್ಲಿ 5, ನವಲಗುಂದ ತಾಲೂಕಿನಲ್ಲಿ 3 ಮತ್ತು ಕಲಘಟಗಿ ತಾಲೂಕಿನಲ್ಲಿ 1 ತೀವ್ರತರ ಹಾಗೂ 2 ಭಾಗಶಃ ಸೇರಿದಂತೆ ಒಟ್ಟು 5 ಮನೆಗಳು ಒಳಗೊಂಡಂತೆ ಜಿಲ್ಲೆಯ ಎಂಟು ತಾಲೂಕುಗಳಲ್ಲಿ 24 ಮನೆಗಳು ಭಾಗಶಃ ಹಾನಿಯಾದ ವರದಿ ಆಗಿದೆ.

 

ನಿನ್ನೆ ರಾತ್ರಿಯಿಂದ ಸುರಿದ ನಿರಂತರ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಹೊನ್ನಾಪುರ ಗಾಮದ ಸಿದ್ದಪ್ಪ ಭೀಮಪ್ಪ ನಾಯ್ಕ ಅವರ ದನದ ಕೊಟ್ಟಿಗೆ ಕುಸಿದು ಅವರ 1 ಎಮ್ಮೆ ಜಾನುವಾರ ಜೀವ ಹಾನಿ ಆಗಿದೆ.

 

ಈ ಎಲ್ಲ ಪ್ರಕರಣಗಳ ಕುರಿತು ಗ್ರಾಮ ಅಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತಹಸಿಲ್ದಾರರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ತನಿಖಾ ತಂಡದಿಂದ ಪರಿಶೀಲನೆ ಕಾರ್ಯ ಜರುಗಿಸಿ, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ನಿಯಮಾವಳಿಗಳಂತೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

 

*ಜುಲೈ 23 ರ ಬೆಳಿಗ್ಗೆ 8-30ರ ವರೆಗಿನ ಮಳೆ ವರದಿ:* ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿಗಳಲ್ಲಿ ಇವತ್ತಿನವರೆಗೂ ಸರಾಸರಿಗಿಂತ ಹೆಚ್ಚು ಮಳೆ ಆಗಿದ್ದು, ಕಳೆದ 8-10 ದಿನಗಳಿಂದ ನಿರಂತರವಾಗಿ ಮಳೆ ಆಗುತ್ತಿದ್ದು, ಅಲ್ಲಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

 

ಜುಲೈ 23 ರ ಬೆಳಿಗ್ಗೆ 8-30 ರ ವರೆಗೆ ದಾಖಲಾಗಿರುವಂತೆ ಪ್ರಸ್ತುತ ದಿನಕ್ಕೆ ಧಾರವಾಡ ತಾಲೂಕು ವಾಡಿಕೆ ಮಳೆ 3.6 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 19.6 ಮೀ.ಮಿ. ಆಗಿದೆ. ಹುಬ್ಬಳ್ಳಿ ತಾಲೂಕು ವಾಡಿಕೆ ಮಳೆ 4.6 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 15.8 ಮೀ.ಮಿ. ಆಗಿದೆ. ಕಲಘಟಗಿ ತಾಲೂಕು ವಾಡಿಕೆ ಮಳೆ 6.2 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 42.1 ಮೀ.ಮಿ. ಆಗಿದೆ. ಕುಂದಗೋಳ ತಾಲೂಕು ವಾಡಿಕೆ ಮಳೆ 4.4 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 17.3 ಮೀ.ಮಿ. ಆಗಿದೆ. ನವಲಗುಂದ ತಾಲೂಕು ವಾಡಿಕೆ ಮಳೆ 1.4 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 5.3 ಮೀ.ಮಿ. ಆಗಿದೆ. ಹುಬ್ಬಳ್ಳಿ ಶಹರ ತಾಲೂಕು ವಾಡಿಕೆ ಮಳೆ 3.5 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 16.3 ಮೀ.ಮಿ. ಆಗಿದೆ. ಅಳ್ನಾವರ ತಾಲೂಕು ವಾಡಿಕೆ ಮಳೆ 11.5 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 47.7 ಮೀ.ಮಿ. ಆಗಿದೆ. ಅಣ್ಣಿಗೇರಿ ತಾಲೂಕು ವಾಡಿಕೆ ಮಳೆ 1.6 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 5.8 ಮೀ.ಮಿ. ಆಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಜೂನ ತಿಂಗಳಲ್ಲಿ 128.4 ಮೀ.ಮಿ. ವಾಡಿಕೆ ಮಳೆ ಆಗಬೇಕಿತ್ತು. ಆದರೆ ವಾಸ್ತವವಾಗಿ 42.9 ಮೀ.ಮಿ ದಷ್ಟು ಮಳೆ ಆಗಿದ್ದು, ಶೇ.64 ರಷ್ಟು ಮಳೆ ಕೊರತೆ ಆಗಿದೆ. ಅದರಂತೆ ಜುಲೈ ತಿಂಗಳಲ್ಲಿ ಇವತ್ತಿನ ( ಜು.23)ವರೆಗೆ ವಾಡಿಕೆಯಂತೆ 121 ಮೀ.ಮಿ ಮಳೆ ಆಗಬೇಕಿತ್ತು, ಆದರೆ ವಾಸ್ತವವಾಗಿ 184 ಮೀ.ಮಿ.ಮಳೆ ಆಗಿದ್ದು, ಶೇ.60 ರಷ್ಟು ಹೆಚ್ಚುವರಿ ಮಳೆ ಆಗಿದೆ. ಇನ್ನೂ ಮೂರನಾಲ್ಕು ದಿನ ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 

*ಎಪ್ರಿಲ್ ದಿಂದ ಇಂದಿನವರೆಗೆ ಜನ, ಜಾನುವಾರು, ಮನೆ ಹಾನಿ:* ಕಳೆದ ಎಪ್ರಿಲ್ 2023 ರಿಂದ ಜುಲೈ 23 ರವೆಗೆ ಜಿಲ್ಲೆಯಲ್ಲಿ 1 ಮಾನವ ಜೀವ ಹಾನಿ ಹಾಗೂ 23 ಜಾನುವಾರು ಜೀವ ಹಾನಿಯಾದ ವರದಿ ಆಗಿದೆ. ಇದರಲ್ಲಿನ 1 ಮಾನವ ಜೀವ ಹಾನಿ ಹಾಗೂ 17 ಜಾನುವಾರು ಹಾನಿಗೆ ಸರಕಾರದ ನಿಯಮಾನುಸಾರ ಈಗಾಗಲೇ ಪರಿಹಾರ ನೀಡಲಾಗಿದೆ. ಉಳಿದಂತೆ ನಿನ್ನೆ ಹುಬ್ಬಳ್ಳಿ ತಾಲೂಕಿನ ಕಟ್ನೂರದಲ್ಲಿ 5 ಕುರಿಮರಿಗಳು ಮತ್ತು ಇಂದು ಹೊನ್ನಾಪುರ ಗ್ರಾಮದಲ್ಲಿ 1 ಎಮ್ಮೆ ಜಾನುವಾರು ಜೀವ ಹಾನಿ ಆಗಿದ್ದು, ನಿಯಮಾನುಸಾರ ಪರಿಶೀಲಿಸಿ, ಶೀಘ್ರವಾಗಿ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 

ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮ ಹಾಗೂ ನಗರಗಳಲ್ಲಿ ಮಳೆಯಿಂದಾಗಿ ಏಪ್ರಿಲ್ ದಿಂದ ಇಲ್ಲಿವರೆಗೆ 83 ಮನೆಗಳಿಗೆ ಭಾಗಶಃ ಹಾಗೂ 6 ಮನೆಗಳಿಗೆ ತೀವ್ರತರವಾಗಿ ಹಾನಿ ಆಗಿದೆ. ಈ ಕುರಿತು ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ನಿಯಮಾನುಸಾರ ಕ್ರಮವಹಿಸಲಾಗುವುದು

ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close