NewsNews In Kannada

ಹುಬ್ಬಳ್ಳಿಯಲ್ಲಿಂದು ನೂತನ ಕಾರ್ಮಿಕ ಭವನ ಉದ್ಘಾಟನೆ

ಹುಬ್ಬಳ್ಳಿ: ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಭವನ ನಿರ್ಮಿಸಿ, ಕಾರ್ಮಿಕರಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿಂದು ನೂತನವಾಗಿ ನಿರ್ಮಿಸಲಾಗಿರುವ ಕಾರ್ಮಿಕ ಭವನ ಕಟ್ಟಡವನ್ನು ಉದ್ಘಾಟಿಸಿ, ಸಂಚಾರಿ‌ ಚಿಕಿತ್ಸಾ ಘಟಕ, ಶ್ರಮಿಕ್ ಸಂಜೀವಿನಿಗೆ ಚಾಲನೆ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 21 ಗುಂಟೆ ಜಾಗೆಯಲ್ಲಿ 7.5 ಕೋಟಿ ವೆಚ್ಚದಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಲಾಗಿದೆ. ಕಾರ್ಮಿಕ ಭವನವು 03 ಮಹಡಿಗಳನ್ನೊಳಗೊಂಡಿದೆ. ತಲಾ 370 ಚ.ಮೀ ಗಳಲ್ಲಿ ನಿರ್ಮಾಣಗೊಂಡ ಪ್ರತಿ ಮಹಡಿಗಳು ಕಛೇರಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅನುಕೂಲಕರವಾಗಿವೆ. ಲಿಫ್ಟ್ , ರ್ಯಾಂಪ್ , ಕುಡಿಯುವ ನೀರು , ಶೌಚಾಲಯ ಹಾಗೂ ಇನ್ನಿತರೆ ಅಗತ್ಯ ಎಲ್ಲ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ. ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ.‌

ಸಹಾಯಕ ಕಾರ್ಮಿಕ ಆಯುಕ್ತರು, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸಂಘ, ಕಾರ್ಮಿಕ ಉಪವಿಭಾಗಧಿಕಾರಿಗಳು ಕಾರ್ಮಿಕ ನಿರೀಕ್ಷಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿಗಳು ಕಾರ್ಮಿಕ ಭವನದಲ್ಲಿ ಕಾರ್ಯಾರಂಭ ಮಾಡಲಿವೆ. ಕಾರ್ಖಾನೆಗಳು, ಬಾಯ್ಲರ್ಸ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಕಚೇರಿಗಳು ಸಹ ಮಂದಿನ ದಿನಮಾನಗಳಲ್ಲಿ ಕಾರ್ಮಿಕ ಭವನದಲ್ಲಿ ಕಾರ್ಯನಿರ್ವಹಿಸಲಿವೆ.

ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಅರಬೈಲು ಶಿವರಾಮ ಹೆಬ್ಬಾರ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಪ್ರವಾಸೋದ್ಯಮ, ಪರಿಸರ ಮತ್ತು ಜೈವಿಕ ವಿಜ್ಞಾನ ಸಚಿವ ಆನಂದ್ ಸಿಂಗ್, ಕಾರ್ಮಿಕ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಕಾರ್ಮಿಕ ಆಯುಕ್ತ ಅಕ್ರಂ ಪಾಷ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುಪ್ರಸಾದ್.ಎಮ್.ಪಿ., ಡಿ.ಸಿ.ಪಿ ಸಾಹೀಲ್ ಬಾಂಗ್ಲಾ, ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ, ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published.

Back to top button
Close